ಗುರು ಸಂಚಾರ 2027 - Guru-sanchara-2027

Author: Sudha Bangera | Updated Wed, 30 Sep 2026 12:52 PM IST

ದೇವಗುರು ಬೃಹಸ್ಪತಿ ಅಥವಾ ಗುರು ಗ್ರಹವು ವೈದಿಕ ಜ್ಯೋತಿಷ್ಯದಲ್ಲಿ ಅತ್ಯಂತ ಪ್ರಭಾವಶಾಲಿ ಗ್ರಹಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಜ್ಯೋತಿಷಿಗಳು ಇವರನ್ನು ಅತ್ಯಂತ ಶುಭ ಗ್ರಹವೆಂದು ಪರಿಗಣಿಸುತ್ತಾರೆ. ಗುರು ಗ್ರಹದ ದೃಷ್ಟಿಯು ಅಮೃತಕ್ಕೆ ಸಮಾನ ಎಂಬ ನಂಬಿಕೆಯಿದೆ. ಅಂದರೆ ಗುರುವು ಜಾತಕದ ಯಾವ ಭಾವವನ್ನು ನೋಡುತ್ತಾರೋ; ಆ ಭಾವದ ಶುಭ ಪ್ರಭಾವವನ್ನು ಹೆಚ್ಚಿಸುವ ಕೆಲಸವನ್ನು ಮಾಡುತ್ತಾರೆ, ಆ ಭಾವಕ್ಕೆ ಸಂಬಂಧಿಸಿದ ಸುಖ-ಸಂಪತ್ತನ್ನು ಸುಧಾರಿಸುವ ಕೆಲಸವನ್ನು ಮಾಡುತ್ತಾರೆ. ಗುರು ಗ್ರಹವನ್ನು ಸಾಮಾನ್ಯವಾಗಿ ಧನ, ಸಂಪತ್ತು ಮತ್ತು ಜ್ಞಾನದ ಹೊರತಾಗಿ ಸಂತಾನ, ವಿವಾಹ ಮುಂತಾದ ಪ್ರಮುಖ ವಿಷಯಗಳ ಕಾರಕ ಗ್ರಹವೆಂದೂ ಪರಿಗಣಿಸಲಾಗಿದೆ. 2027 ರ ವರ್ಷದಲ್ಲಿ ಗುರು ಗ್ರಹದ ಸ್ಥಿತಿಗಳಲ್ಲಿ ಹಲವು ಬಾರಿ ಬದಲಾವಣೆಗಳು ಕಂಡುಬರಲಿವೆ.


Read in English: Jupiter Transit 2027

ವರ್ಷದ ಆರಂಭದ ಸಮಯದಲ್ಲಿ ಗುರುವು ಸಿಂಹ ರಾಶಿಯಲ್ಲಿ ಮಖಾ ನಕ್ಷತ್ರದ ಮೊದಲ ಚರಣದಲ್ಲಿ ವಕ್ರ ಸ್ಥಿತಿಯಲ್ಲಿರುತ್ತಾರೆ. ಅದೇ ಸಮಯದಲ್ಲಿ ವರ್ಷದ ಕೊನೆಯಲ್ಲಿ ಗುರುವು ಕನ್ಯಾ ರಾಶಿಯಲ್ಲಿ ಉತ್ತರಾ ಫಲ್ಗುಣಿ ನಕ್ಷತ್ರದ ಎರಡನೇ ಚರಣದಲ್ಲಿರುತ್ತಾರೆ. ಈ ನಡುವೆ ಗುರುವು ಕಟಕ, ಸಿಂಹ ಮತ್ತು ಕನ್ಯಾ ಮೂರು ರಾಶಿಗಳಲ್ಲಿ ಸಂಚರಿಸಲಿದ್ದಾರೆ. ನಾವು ಹೇಳಿದಂತೆ ವರ್ಷದ ಆರಂಭದ ಸಮಯದಲ್ಲಿ ಗುರುವು ಸಿಂಹ ರಾಶಿಯಲ್ಲಿ ವಕ್ರ ಸ್ಥಿತಿಯಲ್ಲಿದ್ದು, ವಕ್ರ ಸ್ಥಿತಿಯಲ್ಲೇ ನಂಬಿಕೆಯ ಪ್ರಕಾರ ಹಿಮ್ಮುಖವಾಗಿ ಚಲಿಸುತ್ತಾ 25 ಜನವರಿ 2027 ರಂದು ಕಟಕ ರಾಶಿಗೆ ಮರಳಲಿದ್ದಾರೆ. ಅಂದರೆ ಹಿಂದಿನ ವರ್ಷದಂತೆ ಗುರುವು ಪುನಃ ಉಚ್ಛ ಸ್ಥಿತಿಯನ್ನು ಪಡೆಯಲಿದ್ದಾರೆ. 13 ಏಪ್ರಿಲ್ 2027 ರಂದು ಗುರುವು ಮಾರ್ಗಿಯಾಗಲಿದ್ದು, ನೇರ ನಡಿಗೆಯೊಂದಿಗೆ 26 ಜೂನ್ 2027 ರಂದು ಪುನಃ ಸಿಂಹ ರಾಶಿಗೆ ಬರಲಿದ್ದಾರೆ. ಇದರ ನಂತರ ಗುರುವು 26 ನವೆಂಬರ್ 2027 ರವರೆಗೆ ಇಲ್ಲಿಯೇ ಅಂದರೆ ಸಿಂಹ ರಾಶಿಯಲ್ಲೇ ಉಳಿಯಲಿದ್ದಾರೆ. ಆದಾಗ್ಯೂ ಈ ನಡುವೆ 13 ಆಗಸ್ಟ್ 2027 ರ ಸಂಜೆ ಸುಮಾರು 7:32 ಕ್ಕೆ ಗುರು ಗ್ರಹವು ಅಸ್ತಮಿಸಲಿದ್ದು, 13 ಸೆಪ್ಟೆಂಬರ್ 2027 ರ ಬೆಳಿಗ್ಗೆ 5:22 ರವರೆಗೆ ಅಸ್ತ ಸ್ಥಿತಿಯಲ್ಲೇ ಇರಲಿದ್ದಾರೆ. ಅಂದರೆ ಗುರು ಗ್ರಹವು ಈ ಅವಧಿಯಲ್ಲಿ ಸುಮಾರು 27 ದಿನಗಳ ಕಾಲ ಅಸ್ತಮಿಸಿರಲಿದ್ದಾರೆ. ಇವೆಲ್ಲವುಗಳ ಪ್ರಭಾವವು ನಿಮ್ಮ ರಾಶಿಯ ಮೇಲೆ ಅಂದರೆ ನಿಮ್ಮ ಮೇಲೆ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳುವ ಮೊದಲು, ಗುರುವಿನ ಈ ಸ್ಥಿತಿಗಳು ದೇಶ ಮತ್ತು ಪ್ರಪಂಚದ ಮೇಲೆ ಎಂತಹ ಪ್ರಭಾವ ಬೀರಬಹುದು ಎಂಬುದನ್ನು ತಿಳಿದುಕೊಳ್ಳುವುದು ಸಹ ಅಗತ್ಯವಾಗಿದೆ.

2027 ರಲ್ಲಿ ಗುರುವಿನ ಗೋಚಾರದ ದೇಶ-ವಿದೇಶಗಳ ಮೇಲಿನ ಪ್ರಭಾವ:

ಗುರುವಿನ ಗೋಚಾರವು 2027 ರಲ್ಲಿ ಜಾಗತಿಕ ರಾಜಕೀಯ, ಆರ್ಥಿಕತೆ, ತಂತ್ರಜ್ಞಾನ, ಶಿಕ್ಷಣ, ಸಾಮಾಜಿಕ ವ್ಯವಸ್ಥೆ ಮತ್ತು ಕೃಷಿ ಮುಂತಾದವುಗಳ ಮೇಲೆ ಮಹತ್ವದ ಪ್ರಭಾವ ಬೀರಬಹುದು, ಏಕೆಂದರೆ ಈ ವರ್ಷ ಗುರುವಿನ ಸ್ಥಿತಿಯಲ್ಲಿ ಹಲವು ಬದಲಾವಣೆಗಳಾಗಲಿವೆ. ಗುರುವು ಸಿಂಹ ರಾಶಿಯಿಂದ ಕಟಕ ರಾಶಿಗೆ ಮರಳಲಿದ್ದಾರೆ, ನಂತರ ಪುನಃ ನೇರ ನಡಿಗೆಯೊಂದಿಗೆ ಕಟಕ, ಸಿಂಹ ಮತ್ತು ಕನ್ಯಾ ರಾಶಿಯವರೆಗೆ ವರ್ಷದ ಕೊನೆಯ ತಿಂಗಳ ವೇಳೆಗೆ ಸಂಚಾರವನ್ನು ಪೂರ್ಣಗೊಳಿಸಲಿದ್ದಾರೆ. ಆದ್ದರಿಂದ ಈ ವರ್ಷದ ಫಲಿತಾಂಶಗಳನ್ನು ಬೇರೆ ಬೇರೆ ಹಂತಗಳಲ್ಲಿ ಅರ್ಥಮಾಡಿಕೊಳ್ಳುವುದು ಹೆಚ್ಚು ಸೂಕ್ತವಾಗಿರುತ್ತದೆ.

हिंदी में पढ़ें: बृहस्पति गोचर 2027

ಉತ್ತಮ ಜ್ಯೋತಿಷಿಗಳಿಗೆ ಕರೆ ಮಾಡಿ ಮತ್ತು ನಿಮ್ಮ ಜೀವನದ ಮೇಲೆ ಈ ಸಂಚಾರ ಪ್ರಭಾವದ ಬಗ್ಗೆ ವಿವರವಾಗಿ ತಿಳಿಯಿರಿ.

ಜನವರಿ 2027 ರಿಂದ ಏಪ್ರಿಲ್ 2027: 

ವರ್ಷದ ಆರಂಭದಲ್ಲಿ ಗುರುವು ಸಿಂಹ ರಾಶಿಯಲ್ಲಿ ವಕ್ರ ಸ್ಥಿತಿಯಲ್ಲಿರುತ್ತಾರೆ, ಆದರೆ 25 ಜನವರಿಯಿಂದಲೇ ಗುರುವು ಕಟಕ ರಾಶಿಗೆ ಮರಳಲಿದ್ದು, 13 ಏಪ್ರಿಲ್‌ವರೆಗೆ ವಕ್ರ ಸ್ಥಿತಿಯಲ್ಲೇ ಕಟಕ ರಾಶಿಯಲ್ಲಿ ಉಳಿಯಲಿದ್ದಾರೆ. ಏಕೆಂದರೆ ಈ ಅವಧಿಯಲ್ಲಿ ಹೆಚ್ಚಿನ ಸಮಯ ಗುರುವು ಕಟಕ ರಾಶಿಯಲ್ಲೇ ವಕ್ರ ಸ್ಥಿತಿಯಲ್ಲಿರುತ್ತಾರೆ. ಆದ್ದರಿಂದ ಈ ವಿಭಾಗದಲ್ಲಿ ನಾವು ಕಟಕ ರಾಶಿಯಲ್ಲಿ ವಕ್ರ ಗುರುವಿನ ಬಗ್ಗೆಯೇ ಚರ್ಚಿಸೋಣ. ಗುರುವು ವಕ್ರ ಸ್ಥಿತಿಯಲ್ಲಿದ್ದರೂ ಸಹ ಉಚ್ಛ ರಾಶಿಯಲ್ಲಿರುತ್ತಾರೆ. ಆದ್ದರಿಂದ ಇವರ ಫಲಿತಾಂಶಗಳು ಸಂಪೂರ್ಣವಾಗಿ ನಕಾರಾತ್ಮಕವಾಗಿರುವುದಿಲ್ಲ, ಬದಲಾಗಿ ಹಲವು ವಿಷಯಗಳಲ್ಲಿ ಗುರುವು ಅತ್ಯುತ್ತಮ ಫಲಿತಾಂಶಗಳನ್ನು ನೀಡಲಿದ್ದಾರೆ. ಗುರುವು ಈ ಅವಧಿಯಲ್ಲಿ ಹಳೆಯ ನಿರ್ಧಾರಗಳನ್ನು ಮರುಪರಿಶೀಲಿಸುವ ಕೆಲಸವನ್ನು ಮಾಡಬಹುದು. ಯಾವ ನೀತಿಗಳಲ್ಲಿ ನ್ಯೂನತೆಗಳು ಉಳಿದುಕೊಂಡಿದ್ದವೋ ಅವುಗಳಲ್ಲಿ ಸುಧಾರಣೆಗಳು ಕಂಡುಬರಬಹುದು. ಅಪೂರ್ಣವಾಗಿ ಉಳಿದಿರುವ ಕೆಲಸಗಳನ್ನು ಮುಂದುವರಿಸುವ ಕಾರ್ಯ ನಡೆಯಬಹುದು. ಗುರುವು ತಮ್ಮ ಉಚ್ಛ ರಾಶಿಯಲ್ಲಿರುವುದರಿಂದ, ಸಾರ್ವಜನಿಕರು, ನೀರು, ಜಮೀನು, ವಸತಿ, ಕೃಷಿ, ಆಹಾರ ಭದ್ರತೆ ಮತ್ತು ಸಾಮಾಜಿಕ ಕಲ್ಯಾಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಉತ್ತಮ ಅನುಕೂಲತೆಗಳು ಕಂಡುಬರಬಹುದು. ಸರ್ಕಾರದ ಗಮನವು ಈ ವಿಷಯಗಳ ಮೇಲೆ ಹೆಚ್ಚಾಗಿರಬಹುದು. ಆರ್ಥಿಕ ನೀತಿಗಳು, ಬಡ್ಡಿದರಗಳು, ಸರ್ಕಾರದ ವೆಚ್ಚಗಳು ಮತ್ತು ಸಾಮಾಜಿಕ ಭದ್ರತೆಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಮರುಪರಿಶೀಲನೆ ನಡೆಸಬಹುದು.

ಏಪ್ರಿಲ್ 2027 ರಿಂದ ಜೂನ್ 2027: 

ಗುರುವು 13 ಏಪ್ರಿಲ್ 2027 ರಿಂದ ಮಾರ್ಗಿಯಾಗಲಿದ್ದು, 26 ಜೂನ್‌ವರೆಗೆ ಮಾರ್ಗಿ ಸ್ಥಿತಿಯಲ್ಲೇ ಕಟಕ ರಾಶಿಯಲ್ಲಿ ಉಳಿಯಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಗುರುವು ಈ ಅವಧಿಯಲ್ಲಿ ಬಾಕಿ ಉಳಿದಿರುವ ಯೋಜನೆಗಳು ಮತ್ತು ನಿರ್ಧಾರಗಳಿಗೆ ಮತ್ತಷ್ಟು ವೇಗವನ್ನು ನೀಡುವ ಕೆಲಸವನ್ನು ಮಾಡಲಿದ್ದಾರೆ. ಆರ್ಥಿಕ ಮತ್ತು ಆಡಳಿತಾತ್ಮಕ ಮಟ್ಟದಲ್ಲಿ ಉಂಟಾಗುವ ಸುಧಾರಣೆಗಳು ಸ್ಪಷ್ಟವಾಗಿ ಗೋಚರಿಸಲು ಪ್ರಾರಂಭಿಸಬಹುದು.

26 ಜೂನ್ 2027 ರಂದು ಗುರುವು ಸಿಂಹ ರಾಶಿಗೆ ಪ್ರವೇಶಿಸಲಿದ್ದಾರೆ, ಇದು ಈ ವರ್ಷದ ಅಂದರೆ 2027 ರ ಅತ್ಯಂತ ಮಹತ್ವದ ಹಂತವೆಂದು ಪರಿಗಣಿಸಲಾಗುತ್ತದೆ. ಸಿಂಹ ರಾಶಿಯ ಸಂಬಂಧವು ಅಧಿಕಾರದೊಂದಿಗೆ ಜೋಡಿಸಲ್ಪಟ್ಟಿದೆ, ಏಕೆಂದರೆ ಇದು ಗ್ರಹಗಳ ರಾಜನಾದ ಸೂರ್ಯನ ರಾಶಿಯಾಗಿದೆ. ಅಷ್ಟೇ ಅಲ್ಲದೆ, ಈ ರಾಶಿಯ ಸಂಬಂಧವು ನಾಯಕತ್ವ, ಪ್ರತಿಷ್ಠೆ, ಸರ್ಕಾರ, ಸರ್ಕಾರಿ ಸಂಸ್ಥೆಗಳ ಹೊರತಾಗಿ ಕ್ರೀಡೆ ಮತ್ತು ಸೃಜನಶೀಲತೆಯೊಂದಿಗೂ ಬೆಸೆದುಕೊಂಡಿದೆ. ಆದ್ದರಿಂದ 26 ಜೂನ್‌ನಿಂದ 26 ನವೆಂಬರ್ ನಡುವೆ ದೇಶ-ವಿದೇಶಗಳ ರಾಜಕೀಯದಲ್ಲಿ ನಾಯಕತ್ವ ಮತ್ತು ಪ್ರಭಾವದ ಪೈಪೋಟಿ ಕಂಡುಬರಬಹುದು. ದೊಡ್ಡ ದೇಶಗಳು ತಮ್ಮ ಆರ್ಥಿಕ, ತಾಂತ್ರಿಕ, ರಕ್ಷಣೆ ಮತ್ತು ರಾಜತಾಂತ್ರಿಕ ಶಕ್ತಿಯನ್ನು ಪ್ರದರ್ಶಿಸಲು ಪ್ರಯತ್ನಿಸಬಹುದು. ಭಾರತಕ್ಕೂ ಈ ಸಮಯವು ಅಂತರರಾಷ್ಟ್ರೀಯ ಪ್ರತಿಷ್ಠೆ, ರಾಜತಾಂತ್ರಿಕತೆ, ಪ್ರಭಾವ, ರಕ್ಷಣೆ, ತಂತ್ರಜ್ಞಾನ ಮತ್ತು ದೊಡ್ಡ ರಾಷ್ಟ್ರೀಯ ಯೋಜನೆಗಳ ದೃಷ್ಟಿಯಿಂದ ಮಹತ್ವದ್ದಾಗಿರಬಹುದು.

ಏಕೆಂದರೆ ಗುರುವು ಸಿಂಹ ರಾಶಿಯಲ್ಲಿದ್ದಾಗ ಗುರುವಿನ ದೃಷ್ಟಿಯು ಧನು, ಕುಂಭ ಮತ್ತು ಮೇಷ ರಾಶಿಗಳ ಮೇಲೆ ಬೀಳುತ್ತದೆ. ಇದರ ಪರಿಣಾಮವಾಗಿ ಶಿಕ್ಷಣ, ಕಾನೂನು ಸುವ್ಯವಸ್ಥೆ, ಧರ್ಮ-ಅಧ್ಯಾತ್ಮ, ಉನ್ನತ ಶಿಕ್ಷಣ, ಎ.ಐ. ತಂತ್ರಜ್ಞಾನ, ಬಾಹ್ಯಾಕಾಶ, ವೈಜ್ಞಾನಿಕ ಸಂಶೋಧನೆ ಮತ್ತು ಇತರ ಎಲ್ಲಾ ರೀತಿಯ ಕಾನೂನು ಹಾಗೂ ಸಾಮಾಜಿಕ ವಿಷಯಗಳ ಮೇಲೆ ಸಕಾರಾತ್ಮಕ ಪ್ರಭಾವ ಬೀರಬಹುದು. ಇದರ ಹೊರತಾಗಿ ಮನರಂಜನೆ, ಚಲನಚಿತ್ರ, ಕ್ರೀಡೆ ಮತ್ತು ಡಿಜಿಟಲ್ ಕಂಟೆಂಟ್ ಉದ್ಯಮಗಳಲ್ಲೂ ವಿಸ್ತರಣೆ ಕಂಡುಬರಬಹುದು.

17 ಆಗಸ್ಟ್‌ನಿಂದ 13 ಸೆಪ್ಟೆಂಬರ್ 2027 ರ ನಡುವೆ ಗುರು ಗ್ರಹವು ಅಸ್ತಮಿಸಿರಲಿದ್ದಾರೆ. ಈ ಕಾರಣದಿಂದಾಗಿ ಈ ಅವಧಿಯಲ್ಲಿ ಸರ್ಕಾರವು ಶಿಕ್ಷಣ, ನ್ಯಾಯ, ಧರ್ಮ-ಅಧ್ಯಾತ್ಮ ಮತ್ತು ದೊಡ್ಡ ಸಂಸ್ಥೆಗಳಿಗೆ ಸಂಬಂಧಿಸಿದ ನಿರ್ಧಾರಗಳಲ್ಲಿ ಸ್ವಲ್ಪ ಗೊಂದಲದಲ್ಲಿರಬಹುದು. ಸರ್ಕಾರದ ನಿರ್ಧಾರಗಳಲ್ಲಿ ವಿಳಂಬ ಅಥವಾ ಮರುಪರಿಶೀಲನೆಯ ಪರಿಸ್ಥಿತಿ ಕಂಡುಬರಬಹುದು. ಆದಾಗ್ಯೂ ಸೆಪ್ಟೆಂಬರ್ ಮಧ್ಯದ ನಂತರ ಪರಿಸ್ಥಿತಿಯಲ್ಲಿ ಪುನಃ ವೇಗ ಬರುವ ಸಾಧ್ಯತೆಗಳು ಗೋಚರಿಸುತ್ತಿವೆ.

26 ನವೆಂಬರ್ 2027 ರಂದು ಗುರುವು ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾರೆ. ಇದರ ನಂತರ ಈ ವರ್ಷದ ದಿಕ್ಕು ಬದಲಾಗಬಹುದು. ಸರ್ಕಾರದ ಕೆಲವು ನಿರ್ಧಾರಗಳು ಗೊಂದಲಮಯವಾಗಿದ್ದರೂ ಸಹ ಸರ್ಕಾರದ ಉದ್ದೇಶವು; ವ್ಯವಸ್ಥೆ, ಆರೋಗ್ಯ, ಉದ್ಯೋಗ, ಸೇವೆ, ತಾಂತ್ರಿಕ ದಕ್ಷತೆ ಮತ್ತು ಆಡಳಿತಾತ್ಮಕ ಸುಧಾರಣೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಸಕಾರಾತ್ಮಕವಾಗಿರಬಹುದು. ಈ ವರ್ಷದ ಕೊನೆಯ ಭಾಗದಲ್ಲಿ ಉದ್ಯೋಗ, ಆಡಳಿತಾತ್ಮಕ ಸುಧಾರಣೆ, ವೈದ್ಯಕೀಯ, ತಂತ್ರಜ್ಞಾನ, ಆರೋಗ್ಯ ವ್ಯವಸ್ಥೆ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ಸುಧಾರಣೆ ಮುಂತಾದವು ಪ್ರಮುಖ ವಿಷಯಗಳಾಗಬಹುದು.

ಹೇಳುವುದರ ತಾತ್ಪರ್ಯವೇನೆಂದರೆ, 2027 ರ ವರ್ಷವನ್ನು ಗುರುವಿನ ದೃಷ್ಟಿಕೋನದಿಂದ ಮರುಪರಿಶೀಲನೆ, ನಾಯಕತ್ವ ಮತ್ತು ಸುಧಾರಣೆಯ ವರ್ಷವೆಂದು ಕರೆಯಬಹುದು. ವರ್ಷದ ಆರಂಭವು ಸಾರ್ವಜನಿಕರು ಮತ್ತು ಸಾಮಾಜಿಕ ಭದ್ರತೆಗೆ ಸಂಬಂಧಿಸಿದ ವಿಷಯಗಳೊಂದಿಗೆ ಆರಂಭವಾಗಲಿದೆ. ಮಧ್ಯದಲ್ಲಿ ಅಧಿಕಾರ ಮತ್ತು ಜಾಗತಿಕ ನಾಯಕತ್ವದ ಪೈಪೋಟಿ ಹೆಚ್ಚಾಗಲಿದೆ ಮತ್ತು ವರ್ಷದ ಅಂತ್ಯದ ವೇಳೆಗೆ ಪ್ರಪಂಚದ ಗಮನವು ತಂತ್ರಜ್ಞಾನ, ಆರೋಗ್ಯ, ಉದ್ಯೋಗ ಮತ್ತು ವ್ಯವಸ್ಥೆಯ ಸುಧಾರಣೆಯತ್ತ ಕೇಂದ್ರೀಕೃತವಾಗುವ ಭರವಸೆ ಮೂಡಿದೆ.

ಗುರುವಿನ ಈ ಸ್ಥಿತಿಗಳು ನಿಮ್ಮ ಲಗ್ನ ಅಥವಾ ನಿಮ್ಮ ರಾಶಿಯ ಪ್ರಕಾರ ನಿಮ್ಮ ಮೇಲೆ ಎಂತಹ ಪ್ರಭಾವ ಬೀರಬಹುದು ಎಂಬುದನ್ನು ತಿಳಿದುಕೊಳ್ಳೋಣ ಮತ್ತು ಮೊದಲು ಮೇಷ ರಾಶಿಯ ಬಗ್ಗೆ ಚರ್ಚಿಸೋಣ. ಗುರುವಿನ ಈ ಪ್ರಭಾವಗಳನ್ನು ನೀವು ಲಗ್ನ ರಾಶಿಯ ಪ್ರಕಾರ ನೋಡಿದರೆ ಫಲಿತಾಂಶಗಳು ಹೆಚ್ಚು ನಿಖರವಾಗಿ ಗೋಚರಿಸಬಹುದು ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ಲಗ್ನ ರಾಶಿ ತಿಳಿದಿಲ್ಲದಿದ್ದರೆ ನೀವು ಚಂದ್ರ ರಾಶಿಯ ಪ್ರಕಾರ ನೋಡಬಹುದು. ಚಂದ್ರ ರಾಶಿಯೂ ತಿಳಿದಿಲ್ಲದಿದ್ದರೆ ನಿಮ್ಮ ಹೆಸರಿನ ಮೊದಲ ಅಕ್ಷರದ ರಾಶಿಯ ಪ್ರಕಾರ ನೋಡಬಹುದು. ಆದರೂ ಲಗ್ನ ರಾಶಿಯ ಪ್ರಕಾರ ನೋಡುವುದು ಹೆಚ್ಚು ಸೂಕ್ತವಾಗಿರುತ್ತದೆ.

ಮೇಷ ರಾಶಿಯ ಮೇಲೆ 2027 ರಲ್ಲಿ ಗುರುವಿನ ಪ್ರಭಾವ: 

ಮೇಷ ರಾಶಿಯವರೇ! ವರ್ಷದ ಆರಂಭದ ಸಮಯದಲ್ಲಿ ಗುರುವು ನಿಮ್ಮ ಪಂಚಮ ಭಾವದಲ್ಲಿ ವಕ್ರ ಸ್ಥಿತಿಯಲ್ಲಿರುತ್ತಾರೆ. ಸಾಮಾನ್ಯವಾಗಿ ಇಲ್ಲಿ ಗುರುವಿನ ಸ್ಥಿತಿಯನ್ನು ಅನುಕೂಲಕರ ಫಲಿತಾಂಶಗಳನ್ನು ನೀಡುವಂತದ್ದು ಎಂದು ಪರಿಗಣಿಸಲಾಗಿದೆ. ಆದ್ದರಿಂದ ಗುರುವು ವರ್ಷದ ಆರಂಭದಿಂದ 25 ಜನವರಿಯವರೆಗೆ ನಿಮ್ಮ ಶಿಕ್ಷಣ, ಸಂತಾನ, ಪ್ರೀತಿ, ಸೃಜನಶೀಲತೆಯೊಂದಿಗೆ ಬುದ್ಧಿ ಮತ್ತು ಹೂಡಿಕೆ ಮುಂತಾದ ವಿಷಯಗಳಲ್ಲಿ ಉತ್ತಮ ಫಲಿತಾಂಶಗಳನ್ನು ನೀಡಲು ಬಯಸುತ್ತಾರೆ.

25 ಜನವರಿಯಿಂದ 26 ಜೂನ್ ನಡುವೆ ಗುರುವು ಕಟಕ ರಾಶಿಯಲ್ಲಿರುತ್ತಾರೆ. ಗುರುವು 13 ಏಪ್ರಿಲ್‌ವರೆಗೆ ವಕ್ರಿಯಾಗಿದ್ದು, ನಂತರ ಮಾರ್ಗಿಯಾದರೂ ಸಹ ಇರುವುದು ಕಟಕ ರಾಶಿಯಲ್ಲೇ, ಅಂದರೆ ನಿಮ್ಮ ನಾಲ್ಕನೇ ಭಾವದಲ್ಲೇ. ಪರಿಣಾಮವಾಗಿ ಗುರುವು ತಾಯಿ, ಆಸ್ತಿ, ವಾಹನ, ಸುಖ-ಸೌಕರ್ಯಗಳು ಮುಂತಾದ ವಿಷಯಗಳಲ್ಲಿ ಮರುಪರಿಶೀಲನೆ ಮಾಡುವ ಆಲೋಚನೆಗಳನ್ನು ನೀಡಬಹುದು. ಮಾನಸಿಕ ಶಾಂತಿಯಲ್ಲೂ ಸ್ವಲ್ಪ ಏರುಪೇರಾಗಬಹುದು. ಆದ್ದರಿಂದ ಹಿಂದಿನ ಸಮಯದಲ್ಲಿ ನಿಮ್ಮ ನಿರ್ಧಾರದಲ್ಲಿ ಏನಾದರೂ ನ್ಯೂನತೆ ಉಳಿದುಕೊಂಡಿದೆ ಎಂದು ನೀವು ಭಾವಿಸಿದರೆ, ಆ ವಿಷಯದಲ್ಲಿ ತಿದ್ದುಪಡಿ ಸಾಧ್ಯವಾಗುತ್ತದೆ. 13 ಏಪ್ರಿಲ್‌ವರೆಗೆ ಗುರುವು ವಕ್ರ ಸ್ಥಿತಿಯಲ್ಲಿರುವುದರಿಂದ ತಿದ್ದುಪಡಿಯಲ್ಲಿ ಸ್ವಲ್ಪ ವಿಳಂಬವಾಗಬಹುದು, ಆದರೆ ಅಂತಿಮವಾಗಿ ತಿದ್ದುಪಡಿ ಸಾಧ್ಯವಾಗುತ್ತದೆ. 26 ಜೂನ್ ನಂತರ ಗುರುವು ನಿಮ್ಮ ಪಂಚಮ ಭಾವದಲ್ಲಿರುತ್ತಾರೆ, ಇದು ನಿಮ್ಮ ಸಂತಾನ, ಶಿಕ್ಷಣ ಮುಂತಾದ ವಿಷಯಗಳಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಪ್ರೇಮ ಸಂಬಂಧವಿರಲಿ, ನಿಶ್ಚಿತಾರ್ಥವಿರಲಿ ಅಥವಾ ಯಾವುದೇ ರೀತಿಯ ಸೃಜನಶೀಲತೆಯ ವಿಷಯವಿರಲಿ; ಅವುಗಳಲ್ಲೆಲ್ಲಾ ಗುರುವು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡಲಿದ್ದಾರೆ. ಬೌದ್ಧಿಕ ಸಾಮರ್ಥ್ಯವು ಉತ್ತಮವಾಗಿರುತ್ತದೆ. ಹೂಡಿಕೆ ಮುಂತಾದವುಗಳಲ್ಲಿ ಆಸಕ್ತಿ ಹುಟ್ಟಬಹುದು ಮತ್ತು ಹೂಡಿಕೆ ಮಾಡುವುದರಿಂದ ಲಾಭ ಸಿಗಬಹುದು. ಸಂತಾನ ಪ್ರಾಪ್ತಿಗಾಗಿ ಯೋಗವು ಬಲಗೊಳ್ಳುತ್ತದೆ. ಪರೀಕ್ಷೆಗಳಲ್ಲಿ ಉತ್ತಮ ಲಾಭ ದೊರೆಯಬಹುದು.

26 ನವೆಂಬರ್ ನಂತರ ಗುರುವು ನಿಮ್ಮ ಆರನೇ ಭಾವವನ್ನು ತಲುಪಲಿದ್ದಾರೆ. ಪರಿಣಾಮವಾಗಿ ಉದ್ಯೋಗದ ಬಗ್ಗೆ ಕೆಲವು ಚಿಂತೆಗಳು ಕಂಡುಬರಬಹುದು. ಜೀವನದಲ್ಲಿ ಸ್ಪರ್ಧೆಯ ಮಟ್ಟವು ಹೆಚ್ಚಾಗಬಹುದು. ನೀವು ಸ್ಪರ್ಧೆಯಲ್ಲಿ ಮುನ್ನಡೆಯುವಿರಿ, ನಿಮ್ಮ ವಿರೋಧಿಗಳ ಮೇಲೆ ವಿಜಯ ಸಾಧಿಸುವಿರಿ, ಆದರೂ ಇವೆಲ್ಲವುಗಳಲ್ಲಿ ತುಲನಾತ್ಮಕವಾಗಿ ಹೆಚ್ಚು ಹಣ ಖರ್ಚಾಗುವುದರ ಜೊತೆಗೆ ನೀವು ಕಷ್ಟವನ್ನೂ ಅನುಭವಿಸಬಹುದು. ಆರೋಗ್ಯಕ್ಕಾಗಿಯೂ ಹಣ ಖರ್ಚು ಮಾಡಬೇಕಾಗಬಹುದು.

ಪರಿಹಾರ: ಪರಿಹಾರವಾಗಿ ಗುರುವಾರದಂದು ದೇವಾಲಯದಲ್ಲಿ ಹಳದಿ ಬಟ್ಟೆ ಮತ್ತು ಕಡಲೆ ಬೇಳೆಯನ್ನು ದಾನ ಮಾಡಿ, ಜೊತೆಗೆ ಗುರುವಿನ ಯಾವುದೇ ಮಂತ್ರವನ್ನು 108 ಬಾರಿ ಜಪಿಸಬಹುದು. ಬನ್ನಿ, ಈಗ 2027 ರಲ್ಲಿ ವೃಷಭ ರಾಶಿಯ ಮೇಲೆ ಗುರುವು ಎಂತೆಂತಹ ಪ್ರಭಾವ ಬೀರಲಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ.

ಆಸ್ಟ್ರೋಸೇಜ್ ಬೃಹತ್ ಕುಂಡಲಿ: ನಿಖರವಾದ ಮತ್ತು ವಿಶ್ವಾಸಾರ್ಹ ಜೀವನ ಮುನ್ಸೂಚನೆಗಳನ್ನು ಪಡೆಯಿರಿ 

ವೃಷಭ ರಾಶಿಯ ಮೇಲೆ 2027 ರಲ್ಲಿ ಗುರುವಿನ ಪ್ರಭಾವ: 

ವೃಷಭ ರಾಶಿಯವರೇ! ವರ್ಷದ ಆರಂಭದ ಸಮಯದಿಂದ 25 ಜನವರಿಯವರೆಗೆ ಗುರುವು ವಕ್ರ ಸ್ಥಿತಿಯಲ್ಲಿ ನಿಮ್ಮ ನಾಲ್ಕನೇ ಭಾವದಲ್ಲಿ ಇರಲಿದ್ದಾರೆ. ಇದು ಭೂಮಿ, ಮನೆ, ವಾಹನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಮರುಪರಿಶೀಲನೆಯನ್ನು ಬಯಸಬಹುದು. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಮನೆ, ಕುಟುಂಬ, ಆಸ್ತಿ ಅಥವಾ ಯಾವುದೇ ಕೌಟುಂಬಿಕ ವಿಷಯಕ್ಕೆ ಸಂಬಂಧಿಸಿದಂತೆ ಹಿಂದೆ ತೆಗೆದುಕೊಂಡ ನಿರ್ಧಾರದಿಂದ ಯಾರಿಗಾದರೂ ಅಸಮಾಧಾನವಿದ್ದರೆ, ಅದನ್ನು ಬದಲಾಯಿಸಲು ಈ ಸಮಯವು ಸಹಾಯ ಮಾಡಬಹುದು. ಮನೆಯನ್ನು ಅಲಂಕರಿಸುವುದಾಗಿರಲಿ ಅಥವಾ ವಾಹನದಲ್ಲಿ ಏನಾದರೂ ಬದಲಾವಣೆ ಮಾಡುವುದಾಗಿರಲಿ; ಈ ವಿಷಯಗಳಲ್ಲಿ ಈ ಸಮಯವು ನಿಮಗೆ ಉತ್ತಮ ಸಹಾಯ ಮಾಡಬಹುದು.

25 ಜನವರಿಯಿಂದ 26 ಜೂನ್ ನಡುವೆ ಗುರುವಿನ ಗೋಚಾರವು ನಿಮ್ಮ ಮೂರನೇ ಭಾವದಲ್ಲಿರುತ್ತದೆ. ಇದರಲ್ಲಿ 13 ಏಪ್ರಿಲ್‌ವರೆಗೆ ಗುರುವು ವಕ್ರಿಯಾಗಿರುತ್ತಾರೆ. ಮೂರನೇ ಭಾವವು ಧೈರ್ಯ, ಪರಾಕ್ರಮ, ಕಿರಿಯ ಒಡಹುಟ್ಟಿದವರು, ಸಂವಹನ ಮತ್ತು ಕಡಿಮೆ ದೂರದ ಪ್ರಯಾಣಗಳಿಗೆ ಸಂಬಂಧಿಸಿದ್ದರಿಂದ, ಈ ವಿಷಯಗಳಿಗೆ ಸಂಬಂಧಿಸಿದಂತೆ ಮೂರನೇ ಭಾವವು ಸಕ್ರಿಯವಾಗಿರಬಹುದು. ವಿಶೇಷವಾಗಿ 25 ಜನವರಿಯಿಂದ 13 ಏಪ್ರಿಲ್ ನಡುವೆ ಹಳೆಯ ಸಂಬಂಧಗಳು ಮತ್ತೆ ಸಕ್ರಿಯವಾಗಬಹುದು. ಬರವಣಿಗೆ, ಸಂವಹನ, ಮಾರುಕಟ್ಟೆ (ಮಾರ್ಕೆಟಿಂಗ್) ಮತ್ತು ಮಾಧ್ಯಮ ಕ್ಷೇತ್ರದೊಂದಿಗೆ ಸಂಪರ್ಕ ಹೊಂದಿರುವ ಜನರಿಗೆ ಈ ಗೋಚಾರದಿಂದ ಕೆಲವು ವಿಶೇಷ ಲಾಭಗಳು ಸಿಗಬಹುದು. ಆದಾಗ್ಯೂ ಗುರುವು ವಕ್ರಿಯಾಗಿರುವುದರಿಂದ ಫಲಿತಾಂಶಗಳನ್ನು ಪಡೆಯುವಲ್ಲಿ ಸ್ವಲ್ಪ ವಿಳಂಬವೂ ಆಗಬಹುದು. 13 ಏಪ್ರಿಲ್ ನಂತರ ಅಡೆತಡೆಗಳು ಮತ್ತು ವಿಳಂಬಗಳು ತುಲನಾತ್ಮಕವಾಗಿ ಕಡಿಮೆ ಕಂಡುಬರುತ್ತವೆ.

26 ಜೂನ್ ನಂತರ ಗುರುವು ನಿಮ್ಮ ನಾಲ್ಕನೇ ಭಾವದಲ್ಲಿ ಗೋಚಾರ ಮಾಡಲಿದ್ದಾರೆ. ಪರಿಣಾಮವಾಗಿ ಕುಟುಂಬ, ವಾಹನ ಮತ್ತು ಆಸ್ತಿಯ ಜೊತೆಗೆ ಮಾನಸಿಕ ಸುಖದ ವಿಷಯದಲ್ಲೂ ಗುರುವಿನ ಫಲಿತಾಂಶಗಳು ಉತ್ತಮವಾಗಬಹುದು. ಮನೆಯನ್ನು ಅಲಂಕರಿಸುವುದಾಗಿರಲಿ ಅಥವಾ ಹೊಸ ಮನೆ ಖರೀದಿಸುವುದಾಗಿರಲಿ; ಈ ವಿಷಯಗಳಲ್ಲಿ ಗುರುವು ನಿಮಗೆ ಉತ್ತಮ ಸಹಾಯ ಮಾಡಬಹುದು. ವಾಹನ ಖರೀದಿ ಜೊತೆಗೆ ತಾಯಿಗೆ ಸಂಬಂಧಿಸಿದ ವಿಷಯಗಳಲ್ಲೂ ಅನುಕೂಲತೆ ಕಂಡುಬರಬಹುದು. ಆದಾಗ್ಯೂ ಗೋಚಾರಶಾಸ್ತ್ರದಲ್ಲಿ ನಾಲ್ಕನೇ ಭಾವದ ಗುರುವನ್ನು ಅಷ್ಟೊಂದು ಉತ್ತಮವೆಂದು ಹೇಳಲಾಗಿಲ್ಲ. ಆದ್ದರಿಂದ ಎಲ್ಲವೂ ಅನುಕೂಲಕರವಾಗಿರದಿದ್ದರೂ, ಸಾಕಷ್ಟು ವಿಷಯಗಳು ಅನುಕೂಲಕರವಾಗಿರುವುದರಿಂದ ನೀವು ಉತ್ತಮ ಅನುಭವ ಪಡೆಯುವಿರಿ.

26 ನವೆಂಬರ್ ನಂತರ ಗುರು ಗ್ರಹವು ನಿಮ್ಮ ಪಂಚಮ ಭಾವದಲ್ಲಿ ಗೋಚಾರ ಮಾಡಲಿದ್ದಾರೆ. ಪಂಚಮ ಭಾವದಲ್ಲಿ ಗುರುವಿನ ಗೋಚಾರವು ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂದು ಪರಿಗಣಿಸಲಾಗಿದೆ. ಅಂತಹ ಸಂದರ್ಭದಲ್ಲಿ ಗುರುವು ನಿಮಗೆ ಸಂತಾನ, ಶಿಕ್ಷಣ, ಪ್ರೇಮ ಸಂಬಂಧಗಳ ಜೊತೆಗೆ ನಿಮ್ಮ ಲಾಭದ ವಿಷಯಗಳಲ್ಲೂ ಉತ್ತಮ ಸಹಾಯ ಮಾಡಬಹುದು. ಅನಿರೀಕ್ಷಿತವಾಗಿಯೂ ಕೆಲವು ಉತ್ತಮ ಸಾಧನೆಗಳು ನಿಮಗೆ ಲಭಿಸಬಹುದು. ಆದರೆ ಯಾವುದೇ ದೊಡ್ಡ ಆರ್ಥಿಕ ಅಪಾಯವನ್ನು ತೆಗೆದುಕೊಳ್ಳುವುದನ್ನು ತಪ್ಪಿಸುವುದು ಜಾಣತನದ ಕೆಲಸವಾಗಿರುತ್ತದೆ, ಆದರೂ ಸಾಮಾನ್ಯವಾಗಿ ಆರ್ಥಿಕ ವಿಷಯದಲ್ಲೂ ಗುರುವಿನ ಫಲಿತಾಂಶಗಳು ಅನುಕೂಲಕರವಾಗಿರುತ್ತವೆ.

ಪರಿಹಾರ: ಪರಿಹಾರವಾಗಿ ಯಾವುದೇ ಗುರುವಾರದಂದು ವಿದ್ಯಾರ್ಥಿಗಳಿಗೆ ಪುಸ್ತಕ, ನೋಟ್‌ಬುಕ್, ಪೆನ್ನು ಅಥವಾ ಯಾವುದೇ ಶೈಕ್ಷಣಿಕ ಸಾಮಗ್ರಿಗಳನ್ನು ದಾನ ಮಾಡುವುದು ಶುಭಕರವಾಗಿರುತ್ತದೆ. ದೇವಾಲಯದಲ್ಲಿ ಕಡಲೆ ಹಿಟ್ಟಿನಿಂದ ಮಾಡಿದ ಸಿಹಿತಿಂಡಿಗಳನ್ನು ಅರ್ಪಿಸುವುದು ಸಹ ಶುಭಕರವಾಗಿರುತ್ತದೆ. ಬನ್ನಿ, ಈಗ 2027 ರಲ್ಲಿ ಮಿಥುನ ರಾಶಿಯ ಮೇಲೆ ಗುರುವು ಎಂತೆಂತಹ ಪ್ರಭಾವ ಬೀರಲಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ.

ಕಾಳಸರ್ಪ ಯೋಗ - ಕಾಳಸರ್ಪ ಯೋಗ ಕ್ಯಾಲ್ಕುಲೇಟರ್

ಮಿಥುನ ರಾಶಿಯ ಮೇಲೆ 2027 ರಲ್ಲಿ ಗುರುವಿನ ಪ್ರಭಾವ: 

ಮಿಥುನ ರಾಶಿಯವರೇ! ವರ್ಷದ ಆರಂಭದ ಸಮಯದಲ್ಲಿ ಗುರುವು ನಿಮ್ಮ ಮೂರನೇ ಭಾವದಲ್ಲಿ ವಕ್ರ ಸ್ಥಿತಿಯಲ್ಲಿರುತ್ತಾರೆ. ಆದಾಗ್ಯೂ ಗುರುವು ಇಲ್ಲಿ 25 ಜನವರಿಯವರೆಗೆ ಮಾತ್ರ ಇರುತ್ತಾರೆ. ಇಲ್ಲಿ ಗುರುವಿನ ಗೋಚಾರವನ್ನು ಅಷ್ಟೊಂದು ಉತ್ತಮವೆಂದು ಹೇಳಲಾಗಿಲ್ಲ, ಆದರೂ ಸಮತೋಲಿತ ಫಲಿತಾಂಶಗಳನ್ನು ನೀಡುವಲ್ಲಿ ಗುರುವು ನಿಮಗೆ ಉತ್ತಮ ಸಹಾಯ ಮಾಡಬಹುದು. ವಿಶೇಷವಾಗಿ ಪ್ರಯಾಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ, ಮಾಧ್ಯಮ, ಮಾರ್ಕೆಟಿಂಗ್, ನೆಟ್‌ವರ್ಕಿಂಗ್ ಸಂಬಂಧಿತ ವಿಷಯಗಳಲ್ಲಿ ಗುರುವು ನಿಮಗೆ ಅತ್ಯುತ್ತಮ ಫಲಿತಾಂಶಗಳನ್ನು ನೀಡಬಹುದು, ಆದರೆ ನೀವು ಸಹೋದರರು, ಸ್ನೇಹಿತರು ಮತ್ತು ನೆರೆಹೊರೆಯವರೊಂದಿಗೆ ನಿಮ್ಮ ಸಂಬಂಧವನ್ನು ಕಾಪಾಡಿಕೊಳ್ಳುವ ಅಗತ್ಯವಿರುತ್ತದೆ. ದೂರವಾಣಿ ಸಂಭಾಷಣೆಯ ಸಮಯದಲ್ಲಿ ಉತ್ತಮ ಪದಗಳನ್ನು ಬಳಸುವ ಅಗತ್ಯವಿರುತ್ತದೆ. ಕೆಟ್ಟ ಪದಗಳ ಬಳಕೆಯನ್ನು ತಪ್ಪಿಸುವುದು ಜಾಣತನ. 25 ಜನವರಿಯಿಂದ 26 ಜೂನ್‌ವರೆಗೆ ಗುರುವು ನಿಮ್ಮ ಎರಡನೇ ಭಾವದಲ್ಲಿ ಉಚ್ಛ ಸ್ಥಿತಿಯಲ್ಲಿರುತ್ತಾರೆ, ಆದರೆ ರಾಹು-ಕೇತುಗಳ ಪ್ರಭಾವದಲ್ಲಿರುತ್ತಾರೆ ಮತ್ತು 13 ಏಪ್ರಿಲ್‌ವರೆಗೆ ವಕ್ರಿಯಾಗಿಯೂ ಇರುತ್ತಾರೆ. ಅಂದರೆ ಗುರುವಿನ ಗೋಚಾರದಲ್ಲಿ ಕೆಲವು ನ್ಯೂನತೆಗಳಿರುತ್ತವೆ, ಆದರೂ ಗುರುವಿನ ಸ್ಥಾನವು ತುಂಬಾ ಉತ್ತಮವಾಗಿದ್ದು, ಅದು ನಿಮಗೆ ಆರ್ಥಿಕ ಮತ್ತು ಕೌಟುಂಬಿಕ ವಿಷಯಗಳಲ್ಲಿ ಸಾಕಷ್ಟು ಉತ್ತಮ ಫಲಿತಾಂಶಗಳನ್ನು ನೀಡಲು ಬಯಸುತ್ತದೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಮತ್ತು ಕೌಟುಂಬಿಕ ವಿಷಯಗಳಲ್ಲಿ ಅನುಕೂಲತೆ ಹೆಚ್ಚಾಗುವ ಯೋಗಗಳು ನಿರ್ಮಾಣವಾಗುತ್ತವೆ. ಆದರೆ ಗುರುವು ವಕ್ರಿಯಾಗಿರುವುದರಿಂದ ಯಾವುದೇ ಕೌಟುಂಬಿಕ ವಿಷಯವು ಯಾವುದಾದರೂ ಕಾರಣದಿಂದ ಸಿಲುಕಿಕೊಂಡಿದ್ದರೆ ಅಥವಾ ಯಾವುದೇ ಆರ್ಥಿಕ ವಿಷಯದಲ್ಲಿ ತೊಡಕು ಕಂಡುಬರುತ್ತಿದ್ದರೆ, ಅವುಗಳ ಪರಿಹಾರದ ಬಗ್ಗೆ ಸರಿಯಾಗಿ ಚಿಂತನೆ ನಡೆಸುವುದು ಅಗತ್ಯವಾಗಿರುತ್ತದೆ. ಹಾಗೆ ಮಾಡಿದರೆ ನಿಮಗೆ ಸಕಾರಾತ್ಮಕ ಫಲಿತಾಂಶಗಳು ದೊರೆಯುತ್ತವೆ, ಅಂದರೆ ಹಳೆಯ ಸಮಸ್ಯೆಗಳು ಮತ್ತು ತೊಡಕುಗಳಿಂದ ನಿಮಗೆ ಮುಕ್ತಿ ಸಿಗುತ್ತದೆ. 13 ಏಪ್ರಿಲ್‌ನಿಂದ 26 ಜೂನ್ ನಡುವೆ ಗುರುವಿನ ಫಲಿತಾಂಶಗಳು ಅತ್ಯಂತ ಅದ್ಭುತವಾಗಿರಬಹುದು. ಅಂದರೆ ಈ ಅವಧಿಯಲ್ಲಿ ನೀವು ಹಳೆಯ ಸಮಸ್ಯೆಗಳಿಂದಲೂ ಮುಕ್ತಿ ಪಡೆಯುವಿರಿ ಮತ್ತು ಕೆಲವು ಹೊಸ ಲಾಭಗಳನ್ನೂ ಪಡೆಯಲು ಸಾಧ್ಯವಾಗುತ್ತದೆ.

26 ಜೂನ್ ನಂತರದಿಂದ 26 ನವೆಂಬರ್‌ವರೆಗೆ ಗುರುವಿನ ಗೋಚಾರವು ಪುನಃ ನಿಮ್ಮ ಮೂರನೇ ಭಾವದಲ್ಲಿ ನಡೆಯಲಿದ್ದು, ಅದು ಸರಾಸರಿ ಮಟ್ಟದ ಫಲಿತಾಂಶಗಳನ್ನು ನೀಡುವ ಕೆಲಸವನ್ನು ಮಾಡುತ್ತದೆ. ಆದರೆ ಟೂರ್ಸ್ ಅಂಡ್ ಟ್ರಾವೆಲ್ಸ್ ಕೆಲಸ ಮಾಡುವ ಜನರು, ದೂರಸಂಪರ್ಕ ಇಲಾಖೆಗಳಿಗೆ ಸಂಬಂಧಿಸಿದ ಜನರು, ಬರವಣಿಗೆ, ಮಾಧ್ಯಮ, ಮಾರ್ಕೆಟಿಂಗ್, ನೆಟ್‌ವರ್ಕಿಂಗ್ ಮುಂತಾದವುಗಳಿಗೆ ಸಂಬಂಧಿಸಿದ ಜನರು ಸಾಕಷ್ಟು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಧರ್ಮ ಮತ್ತು ಅಧ್ಯಾತ್ಮಕ್ಕೆ ಸಂಬಂಧಿಸಿದ ವಕ್ತಾರರು ಈ ಅವಧಿಯಲ್ಲಿ ಸಾಕಷ್ಟು ಉತ್ತಮ ಫಲಿತಾಂಶಗಳನ್ನು ಪಡೆಯಲಿದ್ದಾರೆ.

26 ನವೆಂಬರ್‌ನಿಂದ ಗುರುವಿನ ಗೋಚಾರವು ನಿಮ್ಮ ನಾಲ್ಕನೇ ಭಾವದಲ್ಲಿ ಆರಂಭವಾಗಲಿದೆ. ಇಲ್ಲಿ ಗುರುವಿನ ಗೋಚಾರವನ್ನು ಅತ್ಯುತ್ತಮವೆಂದು ಹೇಳಲಾಗಿಲ್ಲ, ಆದರೂ ಗುರುವು ಸರಾಸರಿ ಮಟ್ಟದ ಫಲಿತಾಂಶಗಳನ್ನು ನೀಡಬಹುದು. ಏಕೆಂದರೆ ಗುರುವು ನಿಮ್ಮ ಕರ್ಮ ಸ್ಥಾನದ ಅಧಿಪತಿಯಾಗಿ ಕರ್ಮ ಸ್ಥಾನವನ್ನು ನೋಡುತ್ತಾರೆ. ಅಲ್ಲಿ ಶನಿಯ ಪ್ರಭಾವವಿರುವುದರಿಂದ ಕೆಲಸಗಳಲ್ಲಿ ಸ್ವಲ್ಪ ಮಂದಗತಿ ಇರುತ್ತದೆ, ಆದರೆ ನಾವು ಇಲ್ಲಿ ಪ್ರತ್ಯೇಕವಾಗಿ ಗುರುವಿನ ಪ್ರಭಾವದ ಬಗ್ಗೆ ಮಾತನಾಡುತ್ತಿದ್ದೇವೆ, ಆದ್ದರಿಂದ ಗುರುವು ಇಲ್ಲಿ ಕುಳಿತು ವಿದೇಶಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅನುಕೂಲತೆ ನೀಡಬಹುದು. ವೃತ್ತಿ-ವ್ಯವಹಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅನುಕೂಲತೆ ನೀಡಬಹುದು. ಕೆಲವು ಹಳೆಯ ಆರ್ಥಿಕ ವಿಷಯಗಳನ್ನು ಸರಿಪಡಿಸುವಲ್ಲೂ ಗುರುವಿನ ಕೊಡುಗೆ ಉತ್ತಮವಾಗಿರಬಹುದು. ಉಳಿದಂತೆ ಸ್ವಲ್ಪ ಮಟ್ಟಿನ ಮಾನಸಿಕ ಒತ್ತಡ, ಮನೆಯ ಚಿಂತೆಗಳೂ ಇರಬಹುದು, ಆದರೆ ಸಾಮಾನ್ಯವಾಗಿ ಗುರುವು ಯಾವುದೇ ರೀತಿಯ ನಕಾರಾತ್ಮಕ ಫಲಿತಾಂಶಗಳನ್ನು ನೀಡುವುದಿಲ್ಲ.

ಪರಿಹಾರ: ಪರಿಹಾರವಾಗಿ ಗುರುವಾರದಂದು ದೇವಾಲಯದಲ್ಲಿ ಹಿರಿಯ ಅರ್ಚಕರಿಗೆ ಹಣ್ಣುಗಳನ್ನು ದಾನ ಮಾಡಿ. ಸತ್ಯವನ್ನು ಮಾತನಾಡಿ ಆದರೆ ಮಧುರವಾಗಿ ಮಾತನಾಡಿ. ಹಿರಿಯರು ಮತ್ತು ಗುರುಗಳನ್ನು ಗೌರವಿಸುತ್ತಿರಿ. ಬನ್ನಿ, ಈಗ 2027 ರಲ್ಲಿ ಕಟಕ ರಾಶಿಯ ಮೇಲೆ ಗುರುವು ಎಂತೆಂತಹ ಪ್ರಭಾವ ಬೀರಲಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ.

ನಿಮ್ಮ ಚಂದ್ರನ ಚಿಹ್ನೆಯನ್ನು ತಿಳಿಯಿರಿ: ಚಂದ್ರನ ಚಿಹ್ನೆ ಕ್ಯಾಲ್ಕುಲೇಟರ್

ಕಟಕ ರಾಶಿಯ ಮೇಲೆ 2027 ರಲ್ಲಿ ಗುರುವಿನ ಪ್ರಭಾವ: 

ಕಟಕ ರಾಶಿಯವರೇ! ವರ್ಷದ ಆರಂಭದ ಸಮಯದಲ್ಲಿ ಗುರುವಿನ ಗೋಚಾರವು ನಿಮ್ಮ ಎರಡನೇ ಭಾವದಲ್ಲಿ ವಕ್ರ ಸ್ಥಿತಿಯಲ್ಲಿರುತ್ತದೆ. ಇಲ್ಲಿ ಗುರುವು 25 ಜನವರಿಯವರೆಗೆ ಇರಲಿದ್ದಾರೆ. ಸಾಮಾನ್ಯವಾಗಿ ಎರಡನೇ ಭಾವದಲ್ಲಿ ಗುರುವಿನ ಗೋಚಾರವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂದು ಪರಿಗಣಿಸಲಾಗಿದೆ. ಗುರುವು ವಕ್ರಿಯಾಗಿರುವುದರಿಂದ ಕೆಲವು ಹಳೆಯ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಅಗತ್ಯವಿರುತ್ತದೆ. ವಿಶೇಷವಾಗಿ ಆರ್ಥಿಕ ಮತ್ತು ಕೌಟುಂಬಿಕ ವಿಷಯಗಳಲ್ಲಿ ಏನಾದರೂ ತಪ್ಪಾಗಿದ್ದರೆ ಅದನ್ನು ಸರಿಪಡಿಸಲು ಅವಕಾಶಗಳು ಸಿಗುತ್ತವೆ ಮತ್ತು ಸರಿಪಡಿಸಿದ ನಂತರ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಅಂದರೆ 25 ಜನವರಿಯವರೆಗೆ ಗುರುವು ಆರ್ಥಿಕ ಮತ್ತು ಕೌಟುಂಬಿಕ ವಿಷಯಗಳಲ್ಲಿ ಸಾಮಾನ್ಯವಾಗಿ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತಾರೆ. ವಿಶೇಷವಾಗಿ ಹಳೆಯ ಸಮಸ್ಯೆಗಳನ್ನು ಬಗೆಹರಿಸುವ ವಿಷಯದಲ್ಲಿ ಗುರುವಿನ ಕೊಡುಗೆ ಸಾಕಷ್ಟು ಉತ್ತಮವಾಗಿರಬಹುದು.

25 ಜನವರಿಯಿಂದ 26 ಜೂನ್ ನಡುವೆ ಗುರುವಿನ ಗೋಚಾರವು ನಿಮ್ಮ ಮೊದಲನೇ ಭಾವದಲ್ಲಿರುತ್ತದೆ, ಇದರಲ್ಲಿ 13 ಏಪ್ರಿಲ್‌ವರೆಗೆ ಗುರುವು ವಕ್ರ ಸ್ಥಿತಿಯಲ್ಲಿರುತ್ತಾರೆ. ಇದರಿಂದ ಗುರುವಿನ ಫಲಿತಾಂಶಗಳು ಮಿಶ್ರವಾಗಿರಬಹುದು. ನಿಮ್ಮ ಆತ್ಮವಿಶ್ವಾಸ ಮತ್ತು ವ್ಯಕ್ತಿತ್ವದ ಮೇಲೆ ನೀವು ಕೆಲಸ ಮಾಡುವ ಅಗತ್ಯವಿರುತ್ತದೆ. ವಿಶೇಷವಾಗಿ 13 ಏಪ್ರಿಲ್‌ವರೆಗೆ ನಿಮ್ಮ ಸ್ವಂತ ವ್ಯಕ್ತಿತ್ವದಲ್ಲಿ ಉತ್ತಮ ಸುಧಾರಣೆ ಮಾಡಿಕೊಳ್ಳಲು ನಿಮಗೆ ಅವಕಾಶ ಸಿಗುತ್ತದೆ. ಜ್ಞಾನವನ್ನು ಪಡೆಯುವ ಮಾರ್ಗಗಳು ತೆರೆದುಕೊಳ್ಳುತ್ತವೆ. ನೀವು ಸ್ವಯಂ ಅಧ್ಯಯನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬಹುದು, ಆದರೆ ಆರೋಗ್ಯವನ್ನು ನೋಡಿಕೊಳ್ಳುವುದು ಸಹ ಅಗತ್ಯವಾಗಿರುತ್ತದೆ. ಆರೋಗ್ಯವು ದುರ್ಬಲವಾಗಿದ್ದರೆ ಉತ್ತಮ ವೈದ್ಯರನ್ನು ಭೇಟಿಯಾಗುವ ಅವಕಾಶ ಸಿಗಬಹುದು, ಇದರಿಂದ ರೋಗಗಳಿಂದ ಮುಕ್ತಿ ಪಡೆಯಲು ಉತ್ತಮ ನೆರವು ಸಿಗುತ್ತದೆ. 13 ಏಪ್ರಿಲ್ ನಂತರದ ಫಲಿತಾಂಶಗಳು ತುಲನಾತ್ಮಕವಾಗಿ ಹೆಚ್ಚು ಉತ್ತಮವಾಗಿರುತ್ತವೆ.

26 ಜೂನ್‌ನಿಂದ 26 ನವೆಂಬರ್ ನಡುವೆ ಗುರುವಿನ ಗೋಚಾರವು ಪುನಃ ನಿಮ್ಮ ಎರಡನೇ ಭಾವದಲ್ಲಿರುತ್ತದೆ. ಪರಿಣಾಮವಾಗಿ ನೀವು ಧನ, ಕುಟುಂಬ ಮತ್ತು ಮಾತಿಗೆ ಸಂಬಂಧಿಸಿದ ವಿಷಯಗಳಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಬಜೆಟ್ ವಿಷಯದಲ್ಲೂ ನೀವು ಸಾಕಷ್ಟು ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯಬಹುದು. ಆದಾಯದ ಕೆಲವು ಉತ್ತಮ ಮೂಲಗಳು ಗೋಚರಿಸಬಹುದು. ಅದೃಷ್ಟದ ಉತ್ತಮ ಬೆಂಬಲ ಸಿಗಲಿದೆ. ಉದ್ಯೋಗಸ್ಥರೂ ಸಹ ತುಲನಾತ್ಮಕವಾಗಿ ಉತ್ತಮ ಅನುಭವ ಪಡೆಯಲಿದ್ದಾರೆ.

26 ನವೆಂಬರ್ ನಂತರ ಗುರುವಿನ ಗೋಚಾರವು ನಿಮ್ಮ ಮೂರನೇ ಭಾವದಲ್ಲಿ ಆಗಲಿದೆ, ಇದು ಪ್ರಯಾಣಗಳ ಪ್ರಮಾಣವನ್ನು ಹೆಚ್ಚಿಸಬಹುದು. ಸಂಪರ್ಕಗಳನ್ನು ವಿಸ್ತರಿಸುವ ಕೆಲಸವನ್ನೂ ಮಾಡಬಹುದು. ಬರವಣಿಗೆ, ಮಾಧ್ಯಮ ಮತ್ತು ಪ್ರಯಾಣ ಮುಂತಾದವುಗಳಿಗೆ ಸಂಬಂಧಿಸಿದ ಕೆಲಸ ಮಾಡುವ ಜನರು ತುಲನಾತ್ಮಕವಾಗಿ ಹೆಚ್ಚು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಏಕೆಂದರೆ ವ್ಯವಹಾರದಲ್ಲೂ ಸಂವಹನ ಸಂಬಂಧಿತ ವ್ಯವಹಾರಗಳು ಹೆಚ್ಚು ಉತ್ತಮ ಫಲಿತಾಂಶಗಳನ್ನು ನೀಡುವಂತೆ ಕಂಡುಬರುತ್ತಿವೆ. ಇವೆಲ್ಲವುಗಳ ಹೊರತಾಗಿಯೂ ಒಡಹುಟ್ಟಿದವರು ಮತ್ತು ನೆರೆಹೊರೆಯವರೊಂದಿಗೆ ಸಂಬಂಧವನ್ನು ಕಾಪಾಡಿಕೊಳ್ಳುವ ಅಗತ್ಯವು ತುಲನಾತ್ಮಕವಾಗಿ ಹೆಚ್ಚಾಗಿರಬಹುದು. ಅಂದರೆ ಈ ಜನರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಲು ನಿರಂತರ ಪ್ರಯತ್ನ ಮಾಡಬೇಕಾಗುತ್ತದೆ.

ಪರಿಹಾರ: ಪರಿಹಾರವಾಗಿ ಭಗವಾನ್ ವಿಷ್ಣುವಿನ ಪೂಜೆ-ಆರಾಧನೆ ಮಾಡುವುದು ಶುಭಕರವಾಗಿರುತ್ತದೆ. ಕುಟುಂಬದ ಹಿರಿಯರ ಆಶೀರ್ವಾದ ಪಡೆಯುವುದು ಸಹ ಮಂಗಳಕರವಾಗಿರುತ್ತದೆ. ಬನ್ನಿ, ಈಗ 2027 ರಲ್ಲಿ ಸಿಂಹ ರಾಶಿಯ ಮೇಲೆ ಗುರುವು ಎಂತೆಂತಹ ಪ್ರಭಾವ ಬೀರಲಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ.

ಸಿಂಹ ರಾಶಿಯ ಮೇಲೆ 2027 ರಲ್ಲಿ ಗುರುವಿನ ಪ್ರಭಾವ: 

ಸಿಂಹ ರಾಶಿಯವರೇ! ವರ್ಷದ ಆರಂಭದ ಸಮಯದಲ್ಲಿ ಗುರು ಗ್ರಹವು ನಿಮ್ಮ ಪ್ರಥಮ ಭಾವ ಅಂದರೆ ನಿಮ್ಮ ಲಗ್ನ ಅಥವಾ ರಾಶಿಯಲ್ಲೇ ಇರುತ್ತಾರೆ. ಆದರೆ ಗುರುವು ಇಲ್ಲಿ 25 ಜನವರಿಯವರೆಗೆ ಮಾತ್ರ ಇರುತ್ತಾರೆ ಮತ್ತು ವಕ್ರ ಸ್ಥಿತಿಯಲ್ಲಿರುತ್ತಾರೆ. ಇದು ಸಾಮಾನ್ಯವಾಗಿ ನಿಮ್ಮ ವ್ಯಕ್ತಿತ್ವದ ಮೇಲೆ ಕೆಲಸ ಮಾಡುವಂತೆ ಸಂದೇಶ ನೀಡುತ್ತಿದೆ. ನಿಮ್ಮ ಆತ್ಮವಿಶ್ವಾಸ ಮತ್ತು ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ನೀವು ಸಮತೋಲನದಲ್ಲಿಟ್ಟುಕೊಳ್ಳುವ ಅಗತ್ಯವಿರುತ್ತದೆ. ಹೊಸದನ್ನು ಪ್ರಾರಂಭಿಸುವ ಇಚ್ಛೆಯೂ ಜಾಗೃತವಾಗಬಹುದು, ಆದರೆ ಅದರಲ್ಲಿ ಮುನ್ನಡೆಯುವ ಮೊದಲು ಸರಿಯಾದ ಚಿಂತನೆ ಮತ್ತು ಅನುಭವಿ ವ್ಯಕ್ತಿಗಳ ಸಲಹೆ ಅಗತ್ಯವಾಗಿರುತ್ತದೆ. 25 ಜನವರಿಯಿಂದ 26 ಜೂನ್‌ವರೆಗೆ ಗುರು ಗ್ರಹವು ನಿಮ್ಮ ಹನ್ನೆರಡನೇ ಭಾವದಲ್ಲಿರುತ್ತಾರೆ. ಗುರುವು ಉಚ್ಛ ಸ್ಥಿತಿಯಲ್ಲಿದ್ದರೂ ಹನ್ನೆರಡನೇ ಭಾವದಲ್ಲಿರುವುದರಿಂದ ಫಲಿತಾಂಶಗಳು ಹೆಚ್ಚು ಅನುಕೂಲಕರವಾಗಿರಲು ಸಾಧ್ಯವಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಖರ್ಚುಗಳ ಬಗ್ಗೆ ಮರುಪರಿಶೀಲನೆ ಮಾಡುವ ಅಗತ್ಯವಿರುತ್ತದೆ. ಆದಾಗ್ಯೂ ವಿದೇಶ ಪ್ರವಾಸಗಳಿಗೆ ಈ ಸಮಯವನ್ನು ಅನುಕೂಲಕರವೆಂದು ಕರೆಯಲಾಗುತ್ತದೆ. ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರ ಕಳುಹಿಸಬೇಕೆಂದಿದ್ದರೆ ಅದಕ್ಕೂ ಸಮಯವು ಅನುಕೂಲಕರವಾಗಿದೆ. ಆದರೆ ಆರೋಗ್ಯದ ಸಮಸ್ಯೆ ಮೊದಲೇ ಇದ್ದರೆ ಈ ಅವಧಿಯಲ್ಲೂ ಆಸ್ಪತ್ರೆಗೆ ಓಡಾಡಬೇಕಾಗಬಹುದು. ನಿಮ್ಮೊಳಗೆ ಆಧ್ಯಾತ್ಮಿಕ ಭಾವನೆಗಳನ್ನು ಸಮತೋಲನದಲ್ಲಿಟ್ಟುಕೊಳ್ಳುವುದು ಅಗತ್ಯವಾಗಿರುತ್ತದೆ. ಅನಗತ್ಯ ಖರ್ಚುಗಳಿಂದ ಪಾರಾಗುವುದೂ ಅಗತ್ಯ.

26 ಜೂನ್‌ನಿಂದ 26 ನವೆಂಬರ್ ನಡುವೆ ಗುರುವು ಪುನಃ ನಿಮ್ಮ ಪ್ರಥಮ ಭಾವಕ್ಕೆ ಬರಲಿದ್ದು, ಇವರು ನಿಮ್ಮ ವ್ಯಕ್ತಿತ್ವ, ನಿಮ್ಮ ಪ್ರತಿಷ್ಠೆ, ನಿಮ್ಮ ಆತ್ಮವಿಶ್ವಾಸವನ್ನು ಬಲಪಡಿಸಲಿದ್ದಾರೆ; ಆದರೆ ಈ ವಿಷಯಗಳಲ್ಲಿ ಆಳವಾದ ಚಿಂತನೆಯೂ ಅಗತ್ಯವಾಗಿರುತ್ತದೆ. ಈ ಹಿಂದೆ ನಿಮ್ಮ ಪ್ರತಿಷ್ಠೆಗೆ ಅಥವಾ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಯಾವುದೇ ನಿರ್ಧಾರವಾಗಿದ್ದರೆ, ಆ ನಿರ್ಧಾರದ ಬಗ್ಗೆ ಪುನಃ ಚಿಂತನೆ ನಡೆಸುವುದು ಅಗತ್ಯವಾಗಿರುತ್ತದೆ. ವಿವಾಹದ ದೃಷ್ಟಿಕೋನದಿಂದ ಗುರುವಿನ ಈ ಗೋಚಾರವನ್ನು ಅನುಕೂಲಕರ ಫಲಿತಾಂಶಗಳನ್ನು ನೀಡುವಂತದ್ದು ಎಂದು ಹೇಳಲಾಗುತ್ತದೆ.

26 ನವೆಂಬರ್ ನಂತರ ಗುರುವು ನಿಮ್ಮ ಎರಡನೇ ಭಾವವನ್ನು ತಲುಪಲಿದ್ದಾರೆ. ಗುರುವಿಗೆ ಇದು ಅತ್ಯಂತ ಅನುಕೂಲಕರ ಸ್ಥಿತಿ ಎಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಗುರುವು ನಿಮ್ಮ ಆರ್ಥಿಕ ಮತ್ತು ಕೌಟುಂಬಿಕ ವಿಷಯಗಳಲ್ಲಿ ಸಾಕಷ್ಟು ಉತ್ತಮ ಫಲಿತಾಂಶಗಳನ್ನು ನೀಡಲು ಬಯಸುತ್ತಾರೆ. ನೀವು ವಿದ್ಯಾರ್ಥಿಯಾಗಿದ್ದರೆ ಈ ಅವಧಿಯಲ್ಲಿ ನಿಮ್ಮ ಸುತ್ತಮುತ್ತಲಿನ ವಾತಾವರಣವು ಅಧ್ಯಯನಕ್ಕೆ ಅತ್ಯಂತ ಅನುಕೂಲಕರವಾಗಿರುತ್ತದೆ. ಅನಿರೀಕ್ಷಿತವಾಗಿ ಲಾಭ ತಂದುಕೊಡುವಲ್ಲೂ ಗುರುವಿನ ಈ ಗೋಚಾರವು ನಿಮಗೆ ಉತ್ತಮ ಸಹಾಯ ಮಾಡಬಹುದು.

ಪರಿಹಾರ: ಪರಿಹಾರವಾಗಿ ದೀನದಲಿತರಿಗೆ ಮತ್ತು ಬಡವರಿಗೆ ಸೇವೆ ಮಾಡಿ. ಜೊತೆಗೆ ನಿಯಮಿತವಾಗಿ ಹಸುವಿನ ಸೇವೆಯನ್ನು ಮಾಡಿ. ನಿಯಮಿತವಾಗಿ ದೇವಸ್ಥಾನಕ್ಕೆ ಹೋಗಿ ಅಲ್ಲಿ ಶಿವಲಿಂಗಕ್ಕೆ ಜಲಾಭಿಷೇಕ ಮಾಡಿ. ಬನ್ನಿ, ಈಗ 2027 ರಲ್ಲಿ ಕನ್ಯಾ ರಾಶಿಯ ಮೇಲೆ ಗುರುವು ಎಂತೆಂತಹ ಪ್ರಭಾವ ಬೀರಲಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ.

ಇದನ್ನೂ ಓದಿ: ಇಂದಿನ ಅದೃಷ್ಟದ ಬಣ್ಣ

ಕನ್ಯಾ ರಾಶಿಯ ಮೇಲೆ 2027 ರಲ್ಲಿ ಗುರುವಿನ ಪ್ರಭಾವ: 

ಕನ್ಯಾ ರಾಶಿಯವರೇ! 2027 ರ ವರ್ಷದ ಆರಂಭದ ಸಮಯದಲ್ಲಿ ಗುರು ಗ್ರಹದ ಗೋಚಾರವು ನಿಮ್ಮ ಹನ್ನೆರಡನೇ ಭಾವದಲ್ಲಿ ವಕ್ರ ಸ್ಥಿತಿಯಲ್ಲಿರುತ್ತದೆ. ಈ ಎರಡೂ ಸ್ಥಿತಿಗಳು ಗುರುವಿಗೆ ಅನುಕೂಲಕರವೆಂದು ಹೇಳಲಾಗಿಲ್ಲ. ಗುರುವು ಹನ್ನೆರಡನೇ ಭಾವದಲ್ಲಿ ಇರುವುದೂ ಅನುಕೂಲಕರವಲ್ಲ ಮತ್ತು ವಕ್ರಿಯಾಗಿರುವುದೂ ಅನುಕೂಲಕರವಲ್ಲ; ಆದರೆ ಈ ಗೋಚಾರದ ಪ್ರಭಾವದಿಂದಾಗಿ ದೂರದ ಅಥವಾ ವಿದೇಶಿ ಸ್ಥಳದೊಂದಿಗೆ ನಿಮ್ಮ ಸಂಪರ್ಕವು ಬೆಳೆಯಬಹುದು. ಏಕೆಂದರೆ ನಿಮ್ಮ ನಾಲ್ಕನೇ ಭಾವದ ಅಧಿಪತಿಯಾಗಿ ಗುರುವು ಹನ್ನೆರಡನೇ ಭಾವಕ್ಕೆ ಹೋಗುತ್ತಿದ್ದಾರೆ. ಇದು ಅಧ್ಯಯನ ಅಥವಾ ಕೆಲಸಕ್ಕಾಗಿ ವಿದೇಶದೊಂದಿಗೆ ಸಂಪರ್ಕ ಸಾಧಿಸಲು ಸಹಕಾರಿಯಾಗಬಹುದು. ಖರ್ಚುಗಳು ಹೆಚ್ಚಾದರೂ ಧಾರ್ಮಿಕ ಮತ್ತು ಆಧ್ಯಾತ್ಮಿಕ ಯಾತ್ರೆಗಳು ಅಥವಾ ಕಾರ್ಯಗಳಿಗೆ ಖರ್ಚಾಗುವುದರಿಂದ ಮನಸ್ಸಿನಲ್ಲಿ ನೆಮ್ಮದಿಯೂ ಇರುತ್ತದೆ. ಆದಾಗ್ಯೂ ಅನಗತ್ಯ ಖರ್ಚುಗಳನ್ನು ತಡೆಯುವುದೇ ನಿಮ್ಮ ಪ್ರಯತ್ನವಾಗಿರಬೇಕು. ಜೀವನ ಸಂಗಾತಿಯೊಂದಿಗೆ ಸಂಬಂಧವನ್ನು ಅನುಕೂಲಕರವಾಗಿಟ್ಟುಕೊಳ್ಳುವ ಪ್ರಯತ್ನವೂ ನಿರಂತರವಾಗಿ ಅಗತ್ಯವಾಗಿರುತ್ತದೆ. 25 ಜನವರಿಯಿಂದ 26 ಜೂನ್ ನಡುವೆ ಗುರುವಿನ ಗೋಚಾರವು ನಿಮ್ಮ ಲಾಭ ಭಾವದಲ್ಲಿ (ಹನ್ನೊಂದನೇ ಭಾವದಲ್ಲಿ) ಇರುತ್ತದೆ. ಇದರಲ್ಲಿ 13 ಏಪ್ರಿಲ್‌ವರೆಗೆ ಗುರುವು ವಕ್ರಿಯಾಗಿರುತ್ತಾರೆ, ಇದು ಹಳೆಯ ಆರ್ಥಿಕ ನಿರ್ಧಾರಗಳ ಬಗ್ಗೆ ಮರುಚಿಂತನೆ ನಡೆಸುವ ಸಂದೇಶವನ್ನು ನೀಡುತ್ತದೆ. ಹಾಗಿದ್ದರೂ ಫಲಿತಾಂಶಗಳಲ್ಲಿ ಬಹುತೇಕ ಅನುಕೂಲತೆಯೇ ಕಂಡುಬರುತ್ತದೆ. ಏಕೆಂದರೆ ಗುರುವಿನ ಈ ಗೋಚಾರವು ನಿಮಗೆ ಲಾಭವನ್ನು ತಂದುಕೊಡುತ್ತದೆ, ಆದಾಯವನ್ನು ಹೆಚ್ಚಿಸಬಹುದು ಮತ್ತು ಸ್ನೇಹಿತರನ್ನು ಒದಗಿಸಬಹುದು. ಇದು ಆಸೆ ಈಡೇರಿಕೆಯ ಭಾವವಾಗಿರುವುದರಿಂದ 13 ಏಪ್ರಿಲ್ ನಂತರ ಬಹಳ ಸುಲಭವಾಗಿ ಆಸೆ ಈಡೇರಲು ಸಾಧ್ಯವಾಗುತ್ತದೆ, ಆದರೆ ಅದಕ್ಕೂ ಮೊದಲು ಕೆಲವು ಕಷ್ಟಗಳ ನಂತರ ಆಸೆ ಈಡೇರಬಹುದು. ಜನವರಿಯಿಂದ ಏಪ್ರಿಲ್ ನಡುವೆ ಹಳೆಯ ಹೂಡಿಕೆಗಳು, ಸಂಪರ್ಕಗಳು ಅಥವಾ ಸಿಲುಕಿಕೊಂಡ ಲಾಭಗಳು ಮತ್ತೆ ಮುಂದೆ ಬರಬಹುದು. ಆ ಪ್ರಾಪ್ತಿಗಳಲ್ಲಿ ಸ್ವಲ್ಪ ವಿಳಂಬ ಕಂಡುಬಂದರೂ 13 ಏಪ್ರಿಲ್ ನಂತರ ಇವೆಲ್ಲವೂ ಸುಲಭವಾಗಿ ದೊರೆಯುತ್ತವೆ.

26 ಜೂನ್‌ನಿಂದ 26 ನವೆಂಬರ್ ನಡುವೆ ಗುರುವು ಪುನಃ ನಿಮ್ಮ ಹನ್ನೆರಡನೇ ಭಾವದಲ್ಲಿರುತ್ತಾರೆ, ಇದು ಮತ್ತೆ ದೂರದ ಸಂಪರ್ಕವನ್ನು ಸಾಧಿಸಲು ಸಹಕಾರಿಯಾಗಲಿದೆ. ಅಂದರೆ ವರ್ಷದ ಆರಂಭದ 25 ದಿನಗಳಲ್ಲಿ ನಿಮ್ಮ ಸಂಪರ್ಕವು ವಿದೇಶದೊಂದಿಗೆ ಸಾಧಿಸಲು ಸಾಧ್ಯವಾಗದಿದ್ದರೆ ಅಥವಾ ಯಾವುದಾದರೂ ಕಾರಣದಿಂದ ಅಡೆತಡೆಗಳು ಉಂಟಾಗಿದ್ದರೆ, ಈ ದೀರ್ಘಾವಧಿಯಲ್ಲಿ ವಿದೇಶದೊಂದಿಗೆ ಸಂಪರ್ಕ ಸಾಧಿಸುವುದು ಸುಲಭವಾಗುತ್ತದೆ. ಪ್ರಯಾಣಗಳನ್ನೂ ಮಾಡಬೇಕಾಗಬಹುದು. ಆದಾಗ್ಯೂ ಖರ್ಚುಗಳನ್ನು ನಿಯಂತ್ರಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡಬೇಕಾಗುತ್ತದೆ.

26 ನವೆಂಬರ್ ನಂತರ ಗುರು ಗ್ರಹವು ನಿಮ್ಮ ಪ್ರಥಮ ಭಾವದಲ್ಲಿ ಇರಲಿದ್ದಾರೆ ಮತ್ತು ತುಲನಾತ್ಮಕವಾಗಿ ಉತ್ತಮ ಫಲಿತಾಂಶಗಳನ್ನು ನೀಡಲು ಪ್ರಾರಂಭಿಸುತ್ತಾರೆ. ಇಲ್ಲಿಗೆ ಬರುವ ಗುರುವು ನಿಮ್ಮ ಕಳೆದುಹೋದ ಆತ್ಮವಿಶ್ವಾಸವನ್ನು ಮತ್ತೆ ಉತ್ತಮಗೊಳಿಸಲಿದ್ದಾರೆ. ಜ್ಞಾನಾರ್ಜನೆಯ ಕಡೆಗೆ ನಿಮ್ಮ ಒಲವು ಹೆಚ್ಚಾಗಬಹುದು. ನಿಮ್ಮ ವ್ಯಕ್ತಿತ್ವವನ್ನು ಇನ್ನಷ್ಟು ಆಕರ್ಷಕ ಮತ್ತು ಬಲಶಾಲಿಯನ್ನಾಗಿ ಮಾಡಲು ನೀವು ಕೆಲವು ಪ್ರಯತ್ನಗಳನ್ನು ಮಾಡಬಹುದು. ಒಟ್ಟಾರೆಯಾಗಿ ಗುರುವಿನ ಈ ಗೋಚಾರವು ಜೀವನದಲ್ಲಿ ಹೊಸ ದಿಕ್ಕನ್ನು ತಂದುಕೊಡುವ ಕೆಲಸ ಮಾಡಬಹುದು.

ಪರಿಹಾರ: ಪರಿಹಾರವಾಗಿ ದೇವಾಲಯದಲ್ಲಿ ಹಳದಿ ಹಣ್ಣುಗಳು ಅಥವಾ ಹಳದಿ ಬಟ್ಟೆಗಳನ್ನು ದಾನ ಮಾಡಿ ಮತ್ತು ಯಾವುದೇ ಅಗತ್ಯವಿರುವ ವಿದ್ಯಾರ್ಥಿಗೆ ವಿದ್ಯಾಭ್ಯಾಸದಲ್ಲಿ ಸಹಾಯ ಮಾಡಿ. ಬನ್ನಿ, ಈಗ 2027 ರಲ್ಲಿ ತುಲಾ ರಾಶಿಯ ಮೇಲೆ ಗುರುವು ಎಂತೆಂತಹ ಪ್ರಭಾವ ಬೀರಲಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ.

ತುಲಾ ರಾಶಿಯ ಮೇಲೆ 2027 ರಲ್ಲಿ ಗುರುವಿನ ಪ್ರಭಾವ: 

ತುಲಾ ರಾಶಿಯವರೇ! ವರ್ಷದ ಆರಂಭದ ಸಮಯದಲ್ಲಿ ಗುರುವಿನ ಗೋಚಾರವು ನಿಮ್ಮ ಲಾಭ ಭಾವದಲ್ಲಿರುತ್ತದೆ. ಇದು ಅನುಕೂಲಕರವಾದ ವಿಷಯ, ಆದರೆ ವಕ್ರ ಸ್ಥಿತಿಯಲ್ಲಿರುತ್ತದೆ. ಇದರರ್ಥ ನೀವು ಕೆಲಸ ಮಾಡುತ್ತಿರುವ ಆದಾಯದ ಮೂಲಗಳ ಬಗ್ಗೆ ಮತ್ತೊಮ್ಮೆ ಮರುಚಿಂತನೆ ನಡೆಸುವುದು ಅಗತ್ಯವಾಗಿರುತ್ತದೆ. ಇಲ್ಲಿ ಗುರುವು ಯಾವುದೇ ಪರಿಸ್ಥಿತಿಯಲ್ಲೂ ನಿಮಗೆ ಒಂದಲ್ಲ ಒಂದು ಲಾಭವನ್ನು ತಂದುಕೊಡುತ್ತಲೇ ಇರುತ್ತಾರೆ, ಆದರೆ ಇನ್ನೂ ಉತ್ತಮ ಲಾಭಕ್ಕಾಗಿ ಆ ಮೂಲಗಳನ್ನು ಮರುಪರಿಶೀಲಿಸುವುದು ಅಗತ್ಯ.

25 ಜನವರಿಯಿಂದ 26 ಜೂನ್ ನಡುವೆ ಗುರುವಿನ ಗೋಚಾರವು ನಿಮ್ಮ ಹತ್ತನೇ ಭಾವದಲ್ಲಿ ಉಚ್ಛ ಸ್ಥಿತಿಯಲ್ಲಿರುತ್ತದೆ. ಇದರಲ್ಲಿ 13 ಏಪ್ರಿಲ್‌ವರೆಗೆ ಗುರುವು ವಕ್ರಿಯಾಗಿರುತ್ತಾರೆ, ಇದು ಕಾರ್ಯಕ್ಷೇತ್ರ ಮತ್ತು ವೃತ್ತಿಜೀವನಕ್ಕೆ ಸಂಬಂಧಿಸಿದ ಹಳೆಯ ವಿಷಯಗಳ ಮರುಪರಿಶೀಲನೆಯ ಸಮಯವಾಗಿರುತ್ತದೆ. ಉದ್ಯೋಗ ಬದಲಾವಣೆ, ಬಡ್ತಿ ಅಥವಾ ವ್ಯಾಪಾರ ವ್ಯವಹಾರದಲ್ಲಿ ಬದಲಾವಣೆ ಮಾಡುವ ಇಚ್ಛೆ ಮನಸ್ಸಿನಲ್ಲಿರಬಹುದು, ಆದರೆ ನಿರ್ಧಾರ ತೆಗೆದುಕೊಳ್ಳುವ ಮೊದಲು ಸರಿಯಾದ ಚಿಂತನೆ ಅಗತ್ಯ.

26 ಜೂನ್‌ನಿಂದ 26 ನವೆಂಬರ್ ನಡುವೆ ಗುರುವಿನ ಗೋಚಾರವು ನಿಮ್ಮ ಲಾಭ ಭಾವವನ್ನು ತಲುಪಿ ನಿಮಗೆ ಉತ್ತಮ ಲಾಭವನ್ನು ಮಾಡಿಕೊಡಲು ಬಯಸುತ್ತದೆ. ಉದ್ಯೋಗ ಮುಂತಾದವುಗಳ ಮೂಲಕ ಉತ್ತಮ ಲಾಭ ಸಿಗಬಹುದು. ಹೊಸ ಉದ್ಯೋಗದ ಹುಡುಕಾಟದಲ್ಲಿರುವ ಅಥವಾ ಯಾವುದೇ ರೀತಿಯ ಉದ್ಯೋಗದ ಹುಡುಕಾಟದಲ್ಲಿರುವ ಜನರ ಆಸೆ ಈಡೇರಬಹುದು. ಓಡಾಟ ಹೆಚ್ಚಿರಬಹುದು, ಆದರೆ ಓಡಾಟದಿಂದ ಲಾಭವೂ ಸಿಗುತ್ತದೆ. ಎಲ್ಲೋ ಒಂದು ಕಡೆಯಿಂದ ಉತ್ತಮ ಸುದ್ದಿಯೂ ಕೇಳಿಬರಬಹುದು.

26 ನವೆಂಬರ್ ನಂತರ ಗುರುವಿನ ಗೋಚಾರವು ನಿಮ್ಮ ಹನ್ನೆರಡನೇ ಭಾವದಲ್ಲಿರುತ್ತದೆ. ಇದು ಖರ್ಚುಗಳನ್ನು ಹೆಚ್ಚಿಸಬಹುದು. ವಿದೇಶಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಕೆಲವು ಅನುಕೂಲತೆಗಳೂ ಕಂಡುಬರಬಹುದು, ಆದರೆ ಸಾಮಾನ್ಯವಾಗಿ ಜನರ ಖರ್ಚುಗಳು ಹೆಚ್ಚಾಗಬಹುದು. ಓಡಾಟವೂ ಈ ಅವಧಿಯಲ್ಲಿ ಕಡಿಮೆ ಅನುಕೂಲತೆಯನ್ನು ನೀಡುತ್ತದೆ. ಅಂದರೆ ಅನಗತ್ಯ ಓಡಾಟ ಹೆಚ್ಚಾಗಿರುತ್ತದೆ ಮತ್ತು ಕೆಲಸದ ಓಡಾಟ ಕಡಿಮೆಯಿರುತ್ತದೆ. ಉದ್ಯೋಗದಲ್ಲಿ ಬದಲಾವಣೆ ಮಾಡುವ ಇಚ್ಛೆಯೂ ಬಲವಾಗಬಹುದು, ಆದರೆ ಈ ಸಮಯದಲ್ಲಿ ಉದ್ಯೋಗ ಬದಲಾಯಿಸುವ ಮೊದಲು ಸಂಬಂಧಪಟ್ಟ ಸಂಸ್ಥೆಯ ಬಗ್ಗೆ ಸರಿಯಾಗಿ ವಿಚಾರಿಸುವುದು ಜಾಣತನದ ಕೆಲಸವಾಗಿರುತ್ತದೆ.

ಪರಿಹಾರ: ಪರಿಹಾರವಾಗಿ ಗುರುವಾರದಂದು ಬಡ, ಅಗತ್ಯವಿರುವ ವ್ಯಕ್ತಿಗೆ ಅನ್ನದಾನ ಮಾಡಿ. ಹಿರಿಯರು ಮತ್ತು ಮೇಲಧಿಕಾರಿಗಳನ್ನು ಗೌರವಿಸುತ್ತಿರಿ. ಗುರುವಾರದಂದು ದೇವಸ್ಥಾನದಲ್ಲಿ ಕಡಲೆ ಬೇಳೆಯನ್ನು ದಾನ ಮಾಡಿ. ಬನ್ನಿ, ಈಗ 2027 ರಲ್ಲಿ ವೃಶ್ಚಿಕ ರಾಶಿಯ ಮೇಲೆ ಗುರುವು ಎಂತೆಂತಹ ಪ್ರಭಾವ ಬೀರಲಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ.

ಕಾಗ್ನಿಆಸ್ಟ್ರೋ ವೃತ್ತಿಪರ ವರದಿಯೊಂದಿಗೆ ಅತ್ಯುತ್ತಮ ವೃತ್ತಿ ಸಮಾಲೋಚನೆ ಪಡೆಯಿರಿ

ವೃಶ್ಚಿಕ ರಾಶಿಯ ಮೇಲೆ 2027 ರಲ್ಲಿ ಗುರುವಿನ ಪ್ರಭಾವ: 

ವೃಶ್ಚಿಕ ರಾಶಿಯವರೇ! ವರ್ಷದ ಆರಂಭದ ಸಮಯದಲ್ಲಿ ಗುರುವಿನ ಗೋಚಾರವು ನಿಮ್ಮ ಹತ್ತನೇ ಭಾವದಲ್ಲಿ ವಕ್ರ ಸ್ಥಿತಿಯಲ್ಲಿರುತ್ತದೆ. ಅಂತಹ ಸಂದರ್ಭದಲ್ಲಿ ನಿಮ್ಮ ಹುದ್ದೆ, ಪ್ರತಿಷ್ಠೆ ಮತ್ತು ಜವಾಬ್ದಾರಿಗಳ ಬಗ್ಗೆ ನೀವು ಮರುಪರಿಶೀಲನೆ ಮಾಡಬೇಕಾಗಬಹುದು. ಅಂದರೆ ಈ ವಿಷಯಗಳಲ್ಲಿ ಹಿಂದೆ ಎಲ್ಲಾದರೂ ತಪ್ಪು ಅಥವಾ ನ್ಯೂನತೆ ಉಳಿದುಕೊಂಡಿದ್ದರೆ, ಆ ನ್ಯೂನತೆಯನ್ನು ಸರಿಪಡಿಸಿಕೊಂಡು ಮುನ್ನಡೆಯುವುದು ಜಾಣತನ. ಮೇಲಧಿಕಾರಿಗಳೊಂದಿಗೆ ಯಾವುದೇ ಭಿನ್ನಾಭಿಪ್ರಾಯವಿದ್ದರೆ ಅದನ್ನು ಹೋಗಲಾಡಿಸಲು ಇದು ಉತ್ತಮ ಅವಕಾಶವಾಗಿರುತ್ತದೆ.

26 ಜನವರಿಯಿಂದ 26 ಜೂನ್ ನಡುವೆ ಗುರುವಿನ ಗೋಚಾರವು ನಿಮ್ಮ ಭಾಗ್ಯ ಭಾವದಲ್ಲಿ (ಒಂಬತ್ತನೇ ಭಾವದಲ್ಲಿ) ಇರುತ್ತದೆ. ಇದರಲ್ಲಿ 13 ಏಪ್ರಿಲ್‌ವರೆಗೆ ಗುರುವು ವಕ್ರ ಸ್ಥಿತಿಯಲ್ಲಿರುತ್ತಾರೆ. ಇದು ನಿಮ್ಮ ಗುರುಗಳು, ಧರ್ಮ ಮತ್ತು ಸಮಾಜದ ಬಗ್ಗೆ ಯಾವುದೇ ಜವಾಬ್ದಾರಿ ಉಳಿದಿದ್ದರೆ ಅದನ್ನು ಈಗ ಪೂರೈಸಬೇಕು ಎಂಬುದನ್ನು ಸೂಚಿಸುತ್ತದೆ. ದೂರದ ಸ್ಥಳದ ಕೆಲಸ ಅಥವಾ ದೂರದ ಪ್ರಯಾಣವು ಹಿಂದೆ ಎಂದಾದರೂ ಯೋಜಿಸಲ್ಪಟ್ಟು ಅಪೂರ್ಣವಾಗಿದ್ದರೆ, ಈ ಅವಧಿಯಲ್ಲಿ ನೀವು ಅದನ್ನು ಪೂರ್ಣಗೊಳಿಸಬಹುದು. ವಿಶೇಷವಾಗಿ 13 ಏಪ್ರಿಲ್‌ಗಿಂತ ಹಿಂದಿನ ಸಮಯವು ಧರ್ಮ, ಶಿಕ್ಷಣ, ಗುರು ಮತ್ತು ದೂರದ ಪ್ರಯಾಣದ ವಿಷಯದಲ್ಲಿ ಮರುಪರಿಶೀಲನೆ ಮಾಡಲು ಮತ್ತು ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸೂಕ್ತವಾಗಿದೆ. 13 ಏಪ್ರಿಲ್ ನಂತರ ಪರಿಸ್ಥಿತಿಗಳು ಸಾಕಷ್ಟು ಅನುಕೂಲಕರವಾಗಲಿದ್ದು, ಆ ಸಮಯದಲ್ಲಿ ನೀವು ಆರ್ಥಿಕ ವಿಷಯಗಳ ಜೊತೆಗೆ ಶಿಕ್ಷಣ ಮತ್ತು ಸಂತಾನ ಸಂಬಂಧಿತ ವಿಷಯಗಳಲ್ಲೂ ಉತ್ತಮ ಕೆಲಸಗಳನ್ನು ಮಾಡಬಹುದು ಮತ್ತು ಉತ್ತಮ ಫಲಿತಾಂಶಗಳನ್ನೂ ಪಡೆಯಬಹುದು.

26 ಏಪ್ರಿಲ್‌ನಿಂದ 26 ನವೆಂಬರ್ ನಡುವೆ ಗುರುವಿನ ಗೋಚಾರವು ಪುನಃ ನಿಮ್ಮ ಹತ್ತನೇ ಭಾವದಲ್ಲಿರುತ್ತದೆ. ಪರಿಣಾಮವಾಗಿ ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರಯತ್ನಿಸುವಿರಿ. ಮೇಲಧಿಕಾರಿಗಳೊಂದಿಗೆ ಸಂಬಂಧವನ್ನು ಇನ್ನಷ್ಟು ಸುಧಾರಿಸಲು ಪ್ರಯತ್ನಿಸುವಿರಿ ಮತ್ತು ಇದರ ಕೆಲವು ಪ್ರಯೋಜನಗಳೂ ನಿಮಗೆ ಸಿಗಲಿವೆ. ಸಾಮಾನ್ಯವಾಗಿ ಹತ್ತನೇ ಭಾವದಲ್ಲಿ ಗುರುವಿನ ಗೋಚಾರವನ್ನು ಉತ್ತಮ ಫಲಿತಾಂಶ ನೀಡುವಂತದ್ದು ಎಂದು ಪರಿಗಣಿಸಲಾಗುವುದಿಲ್ಲ, ಆದರೆ ಪರಿಶ್ರಮ ವ್ಯರ್ಥವಾಗುವುದಿಲ್ಲ. ಏಕೆಂದರೆ ಇಲ್ಲಿ ಕುಳಿತು ಗುರುವು ನಿಮ್ಮ ಧನ ಭಾವವನ್ನು ನೋಡುತ್ತಿರುತ್ತಾರೆ ಮತ್ತು ಧನ ಭಾವವು ಅವರ ಸ್ವಂತ ಭಾವವಾಗಿದೆ. ಜೊತೆಗೆ ಗುರುವು ಧನದ ಕಾರಕರೂ ಆಗಿದ್ದಾರೆ. ಅಂತಹ ಸಂದರ್ಭದಲ್ಲಿ ಗುರುವು ಆರ್ಥಿಕ ವಿಷಯದಲ್ಲಿ ಉತ್ತಮ ಬೆಂಬಲ ನೀಡಲು ಪ್ರಯತ್ನಿಸುತ್ತಾರೆ ಮತ್ತು ಕಾರ್ಯಕ್ಷೇತ್ರವೂ ಸಾಮಾನ್ಯವಾಗಿ ಉತ್ತಮವಾಗಿದ್ದಾಗ ಮಾತ್ರ ಇದು ಸಾಧ್ಯವಾಗುತ್ತದೆ. ವೃತ್ತಿಪರ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೂ ಈ ಗೋಚಾರವು ಉತ್ತಮ ಫಲಿತಾಂಶಗಳನ್ನು ನೀಡಲಿದೆ.

26 ನವೆಂಬರ್ ನಂತರ ಗುರುವಿನ ಸ್ಥಿತಿಯು ಅತ್ಯಂತ ಅನುಕೂಲಕರವಾಗಲಿದೆ. ಗುರುವು ನಿಮ್ಮ ಲಾಭ ಭಾವವನ್ನು ತಲುಪಲಿದ್ದಾರೆ. ನಿಮಗೆ ವಿವಿಧ ರೀತಿಯಲ್ಲಿ ಲಾಭ ನೀಡಲು ಪ್ರಯತ್ನಿಸಲಿದ್ದಾರೆ. ಹೆಚ್ಚಿನ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಏಕೆಂದರೆ ಇಲ್ಲಿ ಕುಳಿತು ಗುರುವು ನಿಮ್ಮ ಪಂಚಮ ಭಾವವನ್ನು ನೋಡುತ್ತಾರೆ, ಅಲ್ಲಿ ಅವರ ಸ್ವಂತ ರಾಶಿಯಿದೆ. ಇದರಿಂದ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶಗಳು ಸಿಗುತ್ತವೆ. ಬೌದ್ಧಿಕ ಕೆಲಸ ಮಾಡುವ ಜನರಿಗೂ ಗುರುವು ಅತ್ಯುತ್ತಮ ಫಲಿತಾಂಶಗಳನ್ನು ನೀಡಲು ಪ್ರಯತ್ನಿಸುತ್ತಾರೆ.

ಪರಿಹಾರ: ಪರಿಹಾರವಾಗಿ ಗುರು, ಶಿಕ್ಷಕರು ಮತ್ತು ತಂದೆಯ ಜೊತೆಗೆ ಎಲ್ಲಾ ಹಿರಿಯರನ್ನು ಪೂರ್ಣವಾಗಿ ಗೌರವಿಸಿ. ಧಾರ್ಮಿಕ ಅಥವಾ ಶೈಕ್ಷಣಿಕ ಸಂಸ್ಥೆಗೆ ನಿಮ್ಮ ಶಕ್ತಿಗೆ ಅನುಗುಣವಾಗಿ ಸಹಕರಿಸಿ. ಬನ್ನಿ, ಈಗ 2027 ರಲ್ಲಿ ಧನು ರಾಶಿಯ ಮೇಲೆ ಗುರುವು ಎಂತೆಂತಹ ಪ್ರಭಾವ ಬೀರಲಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ.

ನಿಮ್ಮ ಪ್ರೇಮ ಭವಿಷ್ಯ ಇಲ್ಲಿ ಓದಿ

ಧನು ರಾಶಿಯ ಮೇಲೆ 2027 ರಲ್ಲಿ ಗುರುವಿನ ಪ್ರಭಾವ: 

ಧನು ರಾಶಿಯವರೇ! ವರ್ಷದ ಆರಂಭದ ಸಮಯದಲ್ಲಿ ಗುರುವಿನ ಗೋಚಾರವು ನಿಮ್ಮ ಭಾಗ್ಯ ಭಾವದಲ್ಲಿ ವಕ್ರ ಸ್ಥಿತಿಯಲ್ಲಿರುತ್ತದೆ. ಸಾಮಾನ್ಯವಾಗಿ ಭಾಗ್ಯ ಭಾವದಲ್ಲಿ ಗುರುವಿನ ಗೋಚಾರವನ್ನು ಉತ್ತಮ ಫಲಿತಾಂಶ ನೀಡುವಂತದ್ದು ಎಂದು ಪರಿಗಣಿಸಲಾಗುತ್ತದೆ, ಆದರೆ ವಕ್ರಿಯಾಗಿರುವುದರಿಂದ ಧಾರ್ಮಿಕ ವಿಷಯಗಳಾಗಿರಲಿ ಅಥವಾ ತಂದೆಗೆ ಸಂಬಂಧಿಸಿದ ವಿಷಯಗಳಾಗಿರಲಿ; ಅವುಗಳಲ್ಲಿ ಎಲ್ಲಾದರೂ ನ್ಯೂನತೆ ಉಳಿದಿದ್ದರೆ ಅದನ್ನು ಸರಿಪಡಿಸಲು ಇದು ಸರಿಯಾದ ಸಮಯ ಎಂದು ಗುರುವು ಸೂಚಿಸುತ್ತಿದ್ದಾರೆ. ಅಂದರೆ ಧಾರ್ಮಿಕ ಕಾರ್ಯಗಳು, ಶೈಕ್ಷಣಿಕ ಸಂಸ್ಥೆ, ಶಿಕ್ಷಕರು ಮತ್ತು ತಂದೆ ಮುಂತಾದವರಿಗೆ ಸಂಬಂಧಿಸಿದ ವಿಷಯಗಳಲ್ಲಿ ಮರುಪರಿಶೀಲನೆ ಮಾಡುವ ಅವಕಾಶವು ಈ ಅವಧಿಯಲ್ಲಿ ನಿಮಗೆ ದೊರೆಯುತ್ತದೆ.

25 ಜನವರಿಯಂದು ಗುರುವು ವಕ್ರ ಸ್ಥಿತಿಯಲ್ಲೇ ಚಲಿಸುತ್ತಾ ನಿಮ್ಮ ಎಂಟನೇ ಭಾವವನ್ನು ತಲುಪಲಿದ್ದಾರೆ. ಇಲ್ಲಿ ಗುರುವಿನ ಗೋಚಾರವು 26 ಜೂನ್‌ವರೆಗೆ ಇರುತ್ತದೆ. ಗುರುವು ಉಚ್ಛ ಸ್ಥಿತಿಯಲ್ಲಿದ್ದರೂ 13 ಏಪ್ರಿಲ್‌ವರೆಗೆ ವಕ್ರಿಯಾಗಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಗುರುವು ಕೆಲವು ಅನಿರೀಕ್ಷಿತ ಫಲಿತಾಂಶಗಳನ್ನು ನೀಡಬಹುದು. ಹಠಾತ್ತಾಗಿ ಕೆಲವು ದೊಡ್ಡ ಬದಲಾವಣೆಗಳನ್ನು ಮಾಡಬೇಕಾಗಬಹುದು. ಹಳೆಯ ತೆರಿಗೆ (ಟ್ಯಾಕ್ಸ್) ಯಾವುದಾದರೂ ಬಾಕಿ ಉಳಿದಿದ್ದರೆ ಅದನ್ನು ಪಾವತಿಸಲು ಇದು ಸರಿಯಾದ ಸಮಯ. ಯಾವುದೇ ತೊಂದರೆ ಇಲ್ಲದಿದ್ದರೂ ಹಳೆಯ ತೆರಿಗೆ, ಕಾಯಿಲೆ ಅಥವಾ ಜಂಟಿ ಆಸ್ತಿಯ ವಿಷಯಗಳಲ್ಲಿ ಮರುಪರಿಶೀಲನೆ ನಡೆಸುತ್ತಾ ಅವುಗಳನ್ನು ಸರಿಪಡಿಸಲು ಪ್ರಯತ್ನಿಸುವುದು ಅಗತ್ಯವಾಗಿರುತ್ತದೆ. ನೀವು ಹಾಗೆ ಮಾಡಿದರೆ 13 ಏಪ್ರಿಲ್ ನಂತರ ಪರಿಸ್ಥಿತಿಗಳು ಕ್ರಮೇಣ ಅನುಕೂಲಕರವಾಗಲು ಪ್ರಾರಂಭಿಸುತ್ತವೆ.

26 ಜೂನ್‌ನಿಂದ 26 ನವೆಂಬರ್ ನಡುವೆ ಗುರುವಿನ ಗೋಚಾರವು ಪುನಃ ನಿಮ್ಮ ಭಾಗ್ಯ ಭಾವದಲ್ಲಿರುತ್ತದೆ, ಇದು ನಿಮಗೆ ಉತ್ತಮ ಬೆಂಬಲವನ್ನು ನೀಡುತ್ತದೆ. ಗುರುವಿನ ಈ ಗೋಚಾರದಿಂದ ನಿಮ್ಮ ವ್ಯಕ್ತಿತ್ವವು ಇನ್ನಷ್ಟು ಕಂಗೊಳಿಸಲಿದೆ. ಕೌಟುಂಬಿಕ ಜೀವನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅನುಕೂಲತೆ ಉಂಟಾಗಲಿದೆ. ಭೂಮಿ, ಮನೆ, ವಾಹನಕ್ಕೆ ಸಂಬಂಧಿಸಿದ ವಿಷಯಗಳಲ್ಲೂ ಉತ್ತಮ ಫಲಿತಾಂಶಗಳು ಕಂಡುಬರುತ್ತವೆ. ತಂದೆ ಮತ್ತು ತಂದೆಯ ಸಮಾನರಾದ ವ್ಯಕ್ತಿಗಳ ಸಹಕಾರದಿಂದ ಅನೇಕ ಕೆಲಸಗಳು ಪೂರ್ಣಗೊಳ್ಳುತ್ತವೆ. ಧಾರ್ಮಿಕ ವಿಷಯಗಳಲ್ಲೂ ನಿಮ್ಮ ಆಸಕ್ತಿ ಹೆಚ್ಚಾಗಬಹುದು.

26 ನವೆಂಬರ್ ನಂತರ ಗುರುವಿನ ಗೋಚಾರವು ನಿಮ್ಮ ಹತ್ತನೇ ಭಾವಕ್ಕೆ ಹೋಗಲಿದೆ. ಅಂತಹ ಸಂದರ್ಭದಲ್ಲಿ ನಿಮ್ಮ ವ್ಯಾಪಾರ, ವೃತ್ತಿಜೀವನ ಮುಂತಾದವುಗಳಿಗೆ ಹೊಸ ದಿಕ್ಕನ್ನು ನೀಡಲು ನೀವು ಪ್ರಯತ್ನಿಸುವಿರಿ. ಪರಿಶ್ರಮ ಬೇಕಾಗಿದ್ದರೂ ಈ ವಿಷಯಗಳಲ್ಲಿ ನಿಮಗೆ ಯಶಸ್ಸು ದೊರೆಯಲಿದೆ.

ಪರಿಹಾರ: ಪರಿಹಾರವಾಗಿ ಗುರುವಾರದಂದು ದೇವಸ್ಥಾನದಲ್ಲಿ ತುಪ್ಪ, ಕರ್ಪೂರ ಮತ್ತು ಆಲೂಗಡ್ಡೆಯನ್ನು ದಾನ ಮಾಡಿ. ನಿಯಮಿತವಾಗಿ ದೇವಸ್ಥಾನಕ್ಕೆ ಹೋಗಿ. ಬನ್ನಿ, ಈಗ 2027 ರಲ್ಲಿ ಮಕರ ರಾಶಿಯ ಮೇಲೆ ಗುರುವು ಎಂತೆಂತಹ ಪ್ರಭಾವ ಬೀರಲಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ.

ಕಾಲಸರ್ಪ ಯೋಗ - ಕಾಲಸರ್ಪ ಯೋಗ ಕ್ಯಾಲ್ಕುಲೇಟರ್

ಮಕರ ರಾಶಿಯ ಮೇಲೆ 2027 ರಲ್ಲಿ ಗುರುವಿನ ಪ್ರಭಾವ: 

ಮಕರ ರಾಶಿಯವರೇ! ವರ್ಷದ ಆರಂಭದ ಸಮಯದಲ್ಲಿ ಗುರುವಿನ ಗೋಚಾರವು ನಿಮ್ಮ ಎಂಟನೇ ಭಾವದಲ್ಲಿ ವಕ್ರ ಸ್ಥಿತಿಯಲ್ಲಿರುತ್ತದೆ. ಇದನ್ನು ಸಾಮಾನ್ಯವಾಗಿ ಒಳ್ಳೆಯದೆಂದು ಪರಿಗಣಿಸಲಾಗುವುದಿಲ್ಲ; ಬದಲಾಗಿ ನಿಮ್ಮ ಯಾವುದೇ ತೆರಿಗೆ ಬಾಕಿ ಇದ್ದರೆ, ವಿಮೆಗೆ ಸಂಬಂಧಿಸಿದ ಕೆಲಸ ಬಾಕಿ ಇದ್ದರೆ ಅಥವಾ ಜಂಟಿ ಹಣಕಾಸಿಗೆ ಸಂಬಂಧಿಸಿದ ಕೆಲಸ ಬಾಕಿ ಇದ್ದರೆ; ಆ ವಿಷಯಗಳ ಬಗ್ಗೆ ಈ ಅವಧಿಯಲ್ಲಿ ಯೋಚಿಸುವುದು ಮತ್ತು ಅವುಗಳನ್ನು ಸರಿಪಡಿಸುವುದು ಜಾಣತನದ ಕೆಲಸವಾಗಿರುತ್ತದೆ.

25 ಜನವರಿಯಿಂದ 26 ಜೂನ್ ನಡುವೆ ಗುರುವಿನ ಗೋಚಾರವು ನಿಮ್ಮ ಏಳನೇ ಭಾವದಲ್ಲಿರುತ್ತದೆ. ಇದರಲ್ಲಿ 13 ಏಪ್ರಿಲ್‌ವರೆಗೆ ಗುರು ಗ್ರಹವು ವಕ್ರಿಯಾಗಿರುತ್ತಾರೆ. ಏಳನೇ ಭಾವದಲ್ಲಿ ಗುರುವಿನ ಗೋಚಾರವು ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ ಮತ್ತು ಗುರುವು ಉಚ್ಛ ಸ್ಥಿತಿಯಲ್ಲೂ ಇರುತ್ತಾರೆ; ಆದರೆ 13 ಏಪ್ರಿಲ್‌ವರೆಗೆ ಗುರುವು ವಕ್ರಿಯಾಗಿರುವುದು ಪಾಲುದಾರಿಕೆ ಕೆಲಸಗಳಲ್ಲಿ ಮತ್ತು ದೈನಂದಿನ ಉದ್ಯೋಗ ಅಥವಾ ವ್ಯಾಪಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಮರುಪರಿಶೀಲನೆ ನಡೆಸುವ ಅಗತ್ಯವನ್ನು ಸೂಚಿಸುತ್ತದೆ. ಈ ವಿಷಯಗಳಲ್ಲಿ ಎಲ್ಲಾದರೂ ನ್ಯೂನತೆ ಇದ್ದು, ಭವಿಷ್ಯದಲ್ಲಿ ಅದನ್ನು ಸರಿಪಡಿಸಲು ನೀವು ಯೋಚಿಸಿದ್ದರೆ, ಅದನ್ನು ಇದೇ ಅವಧಿಯಲ್ಲಿ ಸರಿಪಡಿಸಿಕೊಳ್ಳುವುದು ಉತ್ತಮ. ನೀವು ಹಾಗೆ ಮಾಡಿದರೆ ಈ ಅವಧಿಯು ನಿಮಗೆ ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತದೆ. ವಿಶೇಷವಾಗಿ 13 ಏಪ್ರಿಲ್ ನಂತರದ ಫಲಿತಾಂಶಗಳು ಅತ್ಯಂತ ಅದ್ಭುತವಾಗಿರಬಹುದು.

26 ಜೂನ್‌ನಿಂದ 26 ನವೆಂಬರ್ ನಡುವೆ ಗುರು ಗ್ರಹವು ಪುನಃ ನಿಮ್ಮ ಎಂಟನೇ ಭಾವವನ್ನು ತಲುಪಲಿದ್ದು, ಇದು ಜಂಟಿ ಹಣ, ವಿಮೆ, ತೆರಿಗೆ ಮತ್ತು ಅನಿರೀಕ್ಷಿತ ವೆಚ್ಚಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಮರುಪರಿಶೀಲನೆ ಮಾಡುವಂತೆ ಮತ್ತು ಜಾಗರೂಕರಾಗಿರುವಂತೆ ಸಂದೇಶ ನೀಡುತ್ತದೆ. ಆದಾಗ್ಯೂ ಈ ಅವಧಿಯಲ್ಲಿ ನಿಮ್ಮ ಆಸಕ್ತಿಯು ಗೂಢ ವಿಷಯಗಳಲ್ಲಿ, ಸಂಶೋಧನೆಯಲ್ಲಿ ಮತ್ತು ಆಧ್ಯಾತ್ಮಿಕ ವಿಷಯಗಳಲ್ಲಿ ಹೆಚ್ಚಾಗಬಹುದು. ಯೋಗ-ವ್ಯಾಯಾಮ ಮಾಡುವ ಇಚ್ಛೆ ಬಲಗೊಳ್ಳಬಹುದು. ಇವೆಲ್ಲವುಗಳ ಹೊರತಾಗಿಯೂ ಈ ಸಮಯವನ್ನು ಸುರಕ್ಷಿತವೆಂದು ಪರಿಗಣಿಸಲಾಗುವುದಿಲ್ಲ. ಅಂದರೆ ಈ ಸಮಯವು ಅಪಾಯಕಾರಿಯಾಗಿದೆ. ಈ ಅವಧಿಯಲ್ಲಿ ಯಾವುದೇ ರೀತಿಯ ಅಪಾಯವನ್ನು ತೆಗೆದುಕೊಳ್ಳದೆ, ಇರುವುದನ್ನು ಹಾಗೆಯೇ ಮುಂದುವರಿಸಿಕೊಂಡು ಹೋಗುವುದು ಹೆಚ್ಚು ಸೂಕ್ತ.

26 ನವೆಂಬರ್ ನಂತರ ಗುರುವಿನ ಗೋಚಾರವು ನಿಮ್ಮ ಭಾಗ್ಯ ಭಾವವನ್ನು ತಲುಪಲಿದೆ. ಗುರುವಿನ ಗೋಚಾರಕ್ಕೆ ಇದು ಉತ್ತಮ ಸ್ಥಾನವಾಗಿದೆ. ಆದ್ದರಿಂದ 26 ನವೆಂಬರ್ ನಂತರ ಗುರುವು ನಿಮಗೆ ಉತ್ತಮ ಸಹಕಾರ ನೀಡಲಿದ್ದಾರೆ. ಅದೃಷ್ಟದ ಪೂರ್ಣ ಬೆಂಬಲ ಸಿಗಲಿದೆ. ದೂರದ ಪ್ರಯಾಣಗಳಲ್ಲಿ ಯಶಸ್ಸು ಸಿಗಲಿದೆ. ಧರ್ಮ, ಅಧ್ಯಾತ್ಮ, ಉನ್ನತ ಶಿಕ್ಷಣ ಮತ್ತು ವಿದೇಶಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನಿಮಗೆ ಉತ್ತಮ ಲಾಭ ಸಿಗಬಹುದು. ಗುರುಗಳು ಮತ್ತು ತಂದೆಯ ಉತ್ತಮ ಬೆಂಬಲ ದೊರೆಯುವ ಯೋಗಗಳು ನಿರ್ಮಾಣವಾಗುತ್ತವೆ.

ಪರಿಹಾರ: ಪರಿಹಾರವಾಗಿ ದೇವಾಲಯದಲ್ಲಿ ತುಪ್ಪ, ಆಲೂಗಡ್ಡೆ ಮತ್ತು ಕರ್ಪೂರವನ್ನು ದಾನ ಮಾಡಿ. ಅಗತ್ಯವಿರುವ ದಂಪತಿಗೆ ಅನ್ನದಾನ ಮಾಡಿ. ಅಹಂಕಾರ ಮತ್ತು ಕಟುವಾದ ಮಾತುಗಳನ್ನು ತಪ್ಪಿಸಿ. ಬನ್ನಿ, ಈಗ 2027 ರಲ್ಲಿ ಕುಂಭ ರಾಶಿಯ ಮೇಲೆ ಗುರುವು ಎಂತೆಂತಹ ಪ್ರಭಾವ ಬೀರಲಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ.

ಕುಂಭ ರಾಶಿಯ ಮೇಲೆ 2027 ರಲ್ಲಿ ಗುರುವಿನ ಪ್ರಭಾವ: 

ಕುಂಭ ರಾಶಿಯವರೇ! ವರ್ಷದ ಆರಂಭದಲ್ಲಿ ಗುರುವಿನ ಗೋಚಾರವು ನಿಮ್ಮ ಏಳನೇ ಭಾವದಲ್ಲಿರುತ್ತದೆ. ಇದು ವಿವಾಹ ಮತ್ತು ಪಾಲುದಾರಿಕೆ ಮುಂತಾದ ವಿಷಯಗಳಲ್ಲಿ ಮರುಪರಿಶೀಲನೆ ನಡೆಸುವಂತೆ ಸೂಚಿಸುತ್ತದೆ. ಅಂದರೆ ವೈವಾಹಿಕ ಜೀವನದ ವಿಷಯದಲ್ಲಿ, ವಿವಾಹ ಸಂಬಂಧಿತ ವಿಷಯದಲ್ಲಿ, ಪಾಲುದಾರಿಕೆ ಕೆಲಸಗಳಲ್ಲಿ ಮತ್ತು ಉದ್ಯೋಗದ ಕೆಲಸಗಳಲ್ಲಿ ನೀವು ಯಾವುದೇ ಅಜಾಗರೂಕತೆ ತೋರುತ್ತಿದ್ದರೆ, ಈ ವಿಷಯಗಳ ಬಗ್ಗೆ ಗಂಭೀರವಾಗಿ ಯೋಚಿಸುವ ಅಗತ್ಯವಿರುತ್ತದೆ.

25 ಜನವರಿಯಿಂದ ಗುರುವು ವಕ್ರ ಸ್ಥಿತಿಯಲ್ಲೇ ಚಲಿಸುತ್ತಾ ನಿಮ್ಮ ಆರನೇ ಭಾವವನ್ನು ತಲುಪಲಿದ್ದಾರೆ. ಆರನೇ ಭಾವದಲ್ಲಿ ಗುರುವಿನ ಗೋಚಾರವನ್ನು ಒಳ್ಳೆಯದೆಂದು ಪರಿಗಣಿಸಲಾಗುವುದಿಲ್ಲ. ಅದರಲ್ಲೂ ಗುರುವು ರಾಹು-ಕೇತುಗಳ ಪ್ರಭಾವದಲ್ಲಿರುತ್ತಾರೆ ಮತ್ತು 13 ಏಪ್ರಿಲ್‌ವರೆಗೆ ವಕ್ರಿಯಾಗಿಯೂ ಇರುತ್ತಾರೆ. ಆದ್ದರಿಂದ ಗುರುವಿನ ಫಲಿತಾಂಶಗಳಲ್ಲಿ ನ್ಯೂನತೆಗಳು ಕಂಡುಬರಬಹುದು. ಗುರುವು ಇಲ್ಲಿ 25 ಜನವರಿಯಿಂದ 26 ಜೂನ್‌ವರೆಗೆ ಇರುವುದರಿಂದ, ನಿಮ್ಮ ಉದ್ಯೋಗದ ವಿಷಯದಲ್ಲಿ ಪೂರ್ಣ ನಿಷ್ಠೆಯಿಂದ ಕೆಲಸ ಮಾಡುವ ಅಗತ್ಯವಿರುತ್ತದೆ. ಸ್ಪರ್ಧಾ ಮನೋಭಾವ ಹೆಚ್ಚಾಗಬಹುದು. ಸ್ಪರ್ಧೆಯಲ್ಲಿ ಮುನ್ನಡೆಯಲು ಈ ಗೋಚಾರವು ಸಹಾಯ ಮಾಡುತ್ತದೆ, ಆದರೆ ವ್ಯರ್ಥ ಕೆಲಸಗಳಲ್ಲಿ ಸ್ಪರ್ಧಿಸುವುದನ್ನು ತಪ್ಪಿಸುವ ಅಗತ್ಯವೂ ಇರುತ್ತದೆ. ರೋಗ, ಸಾಲ ಮತ್ತು ಶತ್ರುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಸ್ವಲ್ಪ ಸಂಘರ್ಷ ಎದುರಿಸಬೇಕಾಗಬಹುದು. ಪರಿಶ್ರಮದಿಂದ ಯಶಸ್ಸು ಸಿಗಲಿದ್ದರೂ ಅಗತ್ಯಕ್ಕಿಂತ ಹೆಚ್ಚಿನ ಪರಿಶ್ರಮಕ್ಕೆ ಸಿದ್ಧರಾಗಿರುವುದು ಅಗತ್ಯವಾಗಿರುತ್ತದೆ. ಆರೋಗ್ಯದ ಬಗ್ಗೆ ಯಾವುದೇ ರೀತಿಯ ಅಜಾಗರೂಕತೆಯನ್ನು ಈ ಅವಧಿಯಲ್ಲಿ ತೋರಬಾರದು. 13 ಏಪ್ರಿಲ್ ನಂತರ ಸ್ವಲ್ಪ ನೆಮ್ಮದಿ ಸಿಕ್ಕರೂ 26 ಜೂನ್‌ವರೆಗೆ ಈ ಎಲ್ಲಾ ಮುನ್ನೆಚ್ಚರಿಕೆಗಳ ಅಗತ್ಯವು ಮುಂದುವರಿಯುತ್ತದೆ.

26 ಜೂನ್‌ನಿಂದ 26 ನವೆಂಬರ್ ನಡುವೆ ಗುರುವಿನ ಗೋಚಾರವು ಪುನಃ ನಿಮ್ಮ ಏಳನೇ ಭಾವದಲ್ಲಿರುತ್ತದೆ, ಇದು ವಿವಾಹ ಮತ್ತು ಪಾಲುದಾರಿಕೆಗೆ ಸಂಬಂಧಿಸಿದ ವಿಷಯಗಳಲ್ಲಿ ಉತ್ತಮ ಅನುಕೂಲತೆಯನ್ನು ನೀಡುತ್ತದೆ. ವ್ಯವಹಾರದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲೂ ಈ ಸಮಯವು ನಿಮಗೆ ಉತ್ತಮ ಸಹಾಯ ಮಾಡುತ್ತದೆ. ಅವಿವಾಹಿತರಿಗೆ ವಿವಾಹದ ಅವಕಾಶಗಳು ಒದಗಿಬರುತ್ತವೆ. ಪಾಲುದಾರಿಕೆ ಕೆಲಸಗಳಲ್ಲಿ ಲಾಭ ದೊರೆಯಲಿದೆ. ಎಲ್ಲಾ ರೀತಿಯ ಕೆಲಸಗಳಲ್ಲೂ ಲಾಭ ಸಿಗುವ ಸಾಧ್ಯತೆಗಳು ಬಲಗೊಳ್ಳುತ್ತಿವೆ. ಆರ್ಥಿಕ ವಿಷಯಗಳಿಗೂ ಈ ಗೋಚಾರವು ಅತ್ಯುತ್ತಮ ಫಲಿತಾಂಶಗಳನ್ನು ನೀಡುವಂತದ್ದು ಎಂದು ಹೇಳಲಾಗುತ್ತದೆ.

26 ನವೆಂಬರ್ ನಂತರ ಗುರುವಿನ ಗೋಚಾರವು ನಿಮ್ಮ ಎಂಟನೇ ಭಾವದಲ್ಲಿ ಆರಂಭವಾಗಲಿದೆ. ಇದನ್ನು ಅನುಕೂಲಕರ ಸ್ಥಿತಿ ಎಂದು ಪರಿಗಣಿಸಲಾಗುವುದಿಲ್ಲ. 26 ನವೆಂಬರ್ ನಂತರ ಪ್ರತಿಯೊಂದು ವಿಷಯದಲ್ಲೂ ಜಾಗರೂಕತೆಯಿಂದ ಕಾರ್ಯನಿರ್ವಹಿಸುವ ಅಗತ್ಯವಿರುತ್ತದೆ. ವಿಶೇಷವಾಗಿ ಯಾವುದೇ ಕಾನೂನು ವಿಷಯವನ್ನು ಸವಾಲಾಗಿ ಸ್ವೀಕರಿಸುವುದು ಸರಿಯಲ್ಲ. ಜಂಟಿ ಹಣದ ವಿಷಯವಿರಲಿ, ವಿಮೆ ಅಥವಾ ಹೂಡಿಕೆಯ ವಿಷಯವಿರಲಿ ಅಥವಾ ಸರ್ಕಾರದ ತೆರಿಗೆಯ ವಿಷಯವಿರಲಿ; ಈ ವಿಷಯಗಳಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಮತ್ತು ಇವುಗಳಿಗೆ ಸಂಬಂಧಿಸಿದ ತೊಡಕುಗಳನ್ನು ಕಾನೂನುಬದ್ಧವಾಗಿ ಪರಿಹರಿಸಿಕೊಳ್ಳುವುದು ಜಾಣತನ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸುವುದೂ ಜಾಣತನದ ಕೆಲಸ.

ಪರಿಹಾರ: ಪರಿಹಾರವಾಗಿ ಕಡಲೆ ಹಿಟ್ಟಿನ ಸಿಹಿ ತಿಂಡಿ ಅಥವಾ ಕಡಲೆ ಬೇಳೆಯನ್ನು ದೇವಸ್ಥಾನದಲ್ಲಿ ದಾನ ಮಾಡಿ. ಯಾವುದೇ ಅನಾರೋಗ್ಯ ಪೀಡಿತ ಅಥವಾ ಅಗತ್ಯವಿರುವ ವ್ಯಕ್ತಿಯ ಸೇವೆ ಮತ್ತು ಸಹಕಾರವನ್ನು ಮಾಡುತ್ತಿರಿ. ಆರೋಗ್ಯ ಸಂಬಂಧಿತ ವಿಷಯಗಳಲ್ಲಿ ಅಜಾಗರೂಕತೆ ಬೇಡ. ಬನ್ನಿ, ಈಗ 2027 ರಲ್ಲಿ ಮೀನ ರಾಶಿಯ ಮೇಲೆ ಗುರುವು ಎಂತೆಂತಹ ಪ್ರಭಾವ ಬೀರಲಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ.

ಮೀನ ರಾಶಿಯ ಮೇಲೆ 2027 ರಲ್ಲಿ ಗುರುವಿನ ಪ್ರಭಾವ: 

ಮೀನ ರಾಶಿಯವರೇ! ವರ್ಷದ ಆರಂಭದ ಸಮಯದಲ್ಲಿ ಗುರುವಿನ ಗೋಚಾರವು ನಿಮ್ಮ ಆರನೇ ಭಾವದಲ್ಲಿರುತ್ತದೆ ಮತ್ತು ವಕ್ರ ಸ್ಥಿತಿಯಲ್ಲಿರುತ್ತದೆ. ಸಾಮಾನ್ಯವಾಗಿ ಈ ಗೋಚಾರವನ್ನು ಅನುಕೂಲಕರವೆಂದು ಪರಿಗಣಿಸಲಾಗುವುದಿಲ್ಲ. ಈ ಗೋಚಾರವು ಸ್ಪರ್ಧಾತ್ಮಕ ವಿಷಯಗಳಲ್ಲಿ ನೀವು ಮರುಪರಿಶೀಲನೆ ಮಾಡಬೇಕೆಂದು ಸೂಚಿಸುತ್ತದೆ. ಎದುರಾಳಿಯನ್ನು ಹಗುರವಾಗಿ ಪರಿಗಣಿಸುವುದು ಸರಿಯಲ್ಲ. ಜೊತೆಗೆ ಉದ್ಯೋಗ ಮತ್ತು ರೋಗಗಳಿಗೆ ಸಂಬಂಧಿಸಿದ ವಿಷಯಗಳಲ್ಲೂ ಮರುಚಿಂತನೆ ನಡೆಸುವ ಅಗತ್ಯವಿರಬಹುದು.

25 ಜನವರಿಯಿಂದ 26 ಜೂನ್ ನಡುವೆ ಗುರುವು ನಿಮ್ಮ ಪಂಚಮ ಭಾವದಲ್ಲಿ ಇರಲಿದ್ದಾರೆ, ಇದರಲ್ಲಿ 13 ಏಪ್ರಿಲ್‌ವರೆಗೆ ಗುರುವು ವಕ್ರ ಸ್ಥಿತಿಯಲ್ಲಿರುತ್ತಾರೆ. ಸಾಮಾನ್ಯವಾಗಿ ಪಂಚಮ ಭಾವದಲ್ಲಿ ಗುರುವಿನ ಗೋಚಾರವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ, ಆದರೆ 13 ಏಪ್ರಿಲ್‌ವರೆಗೆ ವಕ್ರಿಯಾಗಿರುತ್ತಾರೆ. ಇದು ಸಂತಾನ, ಶಿಕ್ಷಣ ಮತ್ತು ಪ್ರೀತಿ ಮುಂತಾದ ವಿಷಯಗಳಲ್ಲಿ ಪುನಃ ಗಮನ ಹರಿಸುವ, ಮರುಪರಿಶೀಲಿಸುವ ಮತ್ತು ನ್ಯೂನತೆಗಳನ್ನು ಹೋಗಲಾಡಿಸುವ ಆಲೋಚನೆಯನ್ನು ನೀಡಬಹುದು. ನೀವು ಈ ಆಲೋಚನೆಯ ಮೇಲೆ ಕೆಲಸ ಮಾಡುವ ಅಗತ್ಯವಿರುತ್ತದೆ. ನೀವು ಹಾಗೆ ಮಾಡಿದರೆ ಗುರುವಿನ ಗೋಚಾರವು ನಿಮಗೆ ಸಾಕಷ್ಟು ಉತ್ತಮ ಫಲಿತಾಂಶಗಳನ್ನು ನೀಡಬಹುದು. ಕೇವಲ ಸಂತಾನ, ಶಿಕ್ಷಣ ಮತ್ತು ಪ್ರೇಮದ ವಿಷಯದಲ್ಲಷ್ಟೇ ಅಲ್ಲದೆ ವೃತ್ತಿಜೀವನ, ಸಾಮಾಜಿಕ ಕ್ಷೇತ್ರ ಮತ್ತು ಸ್ವಂತ ವ್ಯಕ್ತಿತ್ವದ ವಿಷಯದಲ್ಲೂ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. 13 ಏಪ್ರಿಲ್ ನಂತರದ ಫಲಿತಾಂಶಗಳು ಇನ್ನಷ್ಟು ಉತ್ತಮವಾಗಿರಬಹುದು. ಅಂದರೆ 13 ಏಪ್ರಿಲ್‌ನಿಂದ 26 ಜೂನ್ ನಡುವೆ ಸಂತಾನ, ಶಿಕ್ಷಣ, ಪ್ರೀತಿ ಮುಂತಾದವುಗಳಲ್ಲಿ ವಿಶೇಷ ಅನುಕೂಲಕರ ಫಲಿತಾಂಶಗಳು ದೊರೆಯುವ ಯೋಗಗಳು ನಿರ್ಮಾಣವಾಗುತ್ತವೆ.

26 ಜೂನ್‌ನಿಂದ 26 ನವೆಂಬರ್ ನಡುವೆ ಗುರುವಿನ ಗೋಚಾರವು ಪುನಃ ನಿಮ್ಮ ಆರನೇ ಭಾವದಲ್ಲಿ ಆಗಲಿದೆ. ಇದು ಉದ್ಯೋಗ, ಸ್ಪರ್ಧೆ ಮತ್ತು ಶತ್ರುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಕಠಿಣ ಪರಿಶ್ರಮದ ನಂತರ ಉತ್ತಮ ಯಶಸ್ಸನ್ನು ಸೂಚಿಸುತ್ತದೆ. ಪರಿಶ್ರಮವು ಅಗತ್ಯಕ್ಕಿಂತ ಹೆಚ್ಚು ಬೇಕಾಗಬಹುದು ಮತ್ತು ಪರಿಶ್ರಮ ಕಡಿಮೆಯಾದರೆ ಸ್ಪರ್ಧಾತ್ಮಕ ವಿಷಯಗಳು ಹಾಗೂ ಉದ್ಯೋಗ ಸಂಬಂಧಿತ ವಿಷಯಗಳಲ್ಲಿ ಕೆಲವು ದುರ್ಬಲ ಫಲಿತಾಂಶಗಳು ಕಂಡುಬರಬಹುದು. ಆದ್ದರಿಂದ ಉತ್ತಮ ಫಲಿತಾಂಶಗಳನ್ನು ಪಡೆಯಲು ಪರಿಶ್ರಮಕ್ಕೆ ಸಿದ್ಧರಾಗಿರಿ.

26 ನವೆಂಬರ್ ನಂತರ ಗುರುವಿನ ಗೋಚಾರವು ನಿಮ್ಮ ಏಳನೇ ಭಾವಕ್ಕೆ ಹೋಗಲಿದೆ. ಇದನ್ನು ಅನುಕೂಲಕರ ಗೋಚಾರವೆಂದು ಪರಿಗಣಿಸಲಾಗುತ್ತದೆ. ಇಲ್ಲಿಗೆ ಬರುವ ಗುರುವು ವಿವಾಹಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಉತ್ತಮ ಅನುಕೂಲಕರ ಫಲಿತಾಂಶಗಳನ್ನು ನೀಡಲಿದ್ದಾರೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿಬರಲಿದೆ, ವಿಶೇಷವಾಗಿ ವಿವಾಹದ ವಯಸ್ಸಾಗಿ ದೀರ್ಘಕಾಲದಿಂದ ಪ್ರಯತ್ನಿಸುತ್ತಿರುವವರಿಗೆ ಅನುಕೂಲಕರ ಫಲಿತಾಂಶಗಳು ಸಿಗಬಹುದು. ಪಾಲುದಾರಿಕೆ ಕೆಲಸಗಳಲ್ಲೂ ಗುರುವಿನ ಈ ಗೋಚಾರವು ನಿಮಗೆ ಉತ್ತಮ ಲಾಭವನ್ನು ತಂದುಕೊಡಲಿದೆ. ವ್ಯಾಪಾರ ವ್ಯವಹಾರಗಳಲ್ಲೂ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.

ಪರಿಹಾರ: ಪರಿಹಾರವಾಗಿ ಗುರುವಾರದಂದು ಬಾಳೆ ಗಿಡವನ್ನು ಪೂಜಿಸುವುದು ಮತ್ತು ದೇವಸ್ಥಾನದಲ್ಲಿ ಕಡಲೆ ಬೇಳೆಯನ್ನು ದಾನ ಮಾಡುವುದು ಶುಭಕರವಾಗಿರುತ್ತದೆ. ಯಾವುದೇ ಅರ್ಹ ವಿದ್ಯಾರ್ಥಿಗೆ ವಿದ್ಯಾಭ್ಯಾಸದ ವಿಷಯದಲ್ಲಿ ಸಹಾಯ ಮಾಡುವುದು ಸಹ ಅನುಕೂಲಕರ ಫಲಿತಾಂಶಗಳನ್ನು ಪಡೆಯಲು ಸಹಾಯಕವಾಗಲಿದೆ.

ರತ್ನಗಳು, ಯಂತ್ರ, ಇತ್ಯಾದಿ ಸೇರಿದಂತೆ ಜ್ಯೋತಿಷ್ಯ ಪರಿಹಾರಗಳಿಗಾಗಿ, ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್

ಗುರುವಿನ ಈ ಗೋಚಾರ ಫಲಗಳ ಮೂಲಕ ನಿಮ್ಮ ಮುಂದಿನ ಸಮಯವನ್ನು ಯೋಜಿಸಲು ನಿಮಗೆ ಉತ್ತಮ ಬೆಂಬಲ ಸಿಗುತ್ತದೆ ಎಂದು ನಾವು ಭಾವಿಸುತ್ತೇವೆ. ಮುಂಬರುವ ಸಮಯವು ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಪ್ರಗತಿಯನ್ನು ತರಲಿ. ನಿಮ್ಮೆಲ್ಲರಿಗೂ ಮುಂಬರುವ ಭವಿಷ್ಯಕ್ಕಾಗಿ ಹೃತ್ಪೂರ್ವಕ ಶುಭ ಹಾರೈಕೆಗಳು!

ಹೆಚ್ಚಾಗಿ ಕೇಳುವ ಪ್ರಶ್ನೆಗಳು

1. 2027 ರಲ್ಲಿ ಗುರು ಗ್ರಹವು ಯಾವ ರಾಶಿಗಳಲ್ಲಿ ಗೋಚಾರ ಮಾಡಲಿದೆ?

2027 ರಲ್ಲಿ ಗುರು ಗ್ರಹವು ಸಿಂಹ, ಕಟಕ ಮತ್ತು ಕನ್ಯಾ ಈ ಮೂರು ರಾಶಿಗಳಲ್ಲಿ ಸಂಚರಿಸಲಿದೆ.

2. 2027 ರಲ್ಲಿ ಗುರು ಗ್ರಹವು ಎಷ್ಟು ದಿನಗಳ ಕಾಲ ಅಸ್ತಮಿಸಿರಲಿದೆ?

ಗುರುವು 13 ಆಗಸ್ಟ್ 2027 ರಿಂದ 13 ಸೆಪ್ಟೆಂಬರ್ 2027 ರವರೆಗೆ ಸುಮಾರು 27 ದಿನಗಳ ಕಾಲ ಅಸ್ತ ಸ್ಥಿತಿಯಲ್ಲಿರಲಿದೆ.

3. ಈ ಗೋಚಾರ ಫಲವನ್ನು ಲಗ್ನ ರಾಶಿ ಅಥವಾ ಚಂದ್ರ ರಾಶಿಯ ಪ್ರಕಾರ ನೋಡಬೇಕೇ?

ಈ ಗೋಚಾರ ಫಲವನ್ನು ಲಗ್ನ ರಾಶಿಯ ಪ್ರಕಾರ ನೋಡುವುದು ಅತ್ಯಂತ ನಿಖರವಾಗಿರುತ್ತದೆ; ಲಗ್ನ ತಿಳಿದಿಲ್ಲದಿದ್ದರೆ ಚಂದ್ರ ರಾಶಿಯ ಪ್ರಕಾರ ನೋಡಬಹುದು.

Talk to Astrologer Chat with Astrologer